ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್‌ಗೆ ಸಮನ್ಸ್‌ ನೀಡಿದ ದೆಹಲಿ ನ್ಯಾಯಾಲಯ: ಫೆ.17ರಂದು ಹಾಜರಾಗುವಂತೆ ಸೂಚನೆ

ಇಂದು ಆದೇಶ ಪ್ರಕಟಿಸಿದ ರವೂಜ್‌ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶೆ ದಿವ್ಯಾ ಮಲ್ಹೋತ್ರಾ ಅವರು ಜಾರಿ ನಿರ್ದೇಶನಾಲಯದ ದೂರನ್ನು ಪರಿಗಣಿಸಲಾಗಿದ್ದು ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗುತ್ತಿದೆ ಎಂದರು.
ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯ
ಅರವಿಂದ್ ಕೇಜ್ರಿವಾಲ್ ಮತ್ತು ಜಾರಿ ನಿರ್ದೇಶನಾಲಯಅರವಿಂದ್ ಕೇಜ್ರಿವಾಲ್ (ಫೇಸ್‌ಬುಕ್‌)

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಐದು ಬಾರಿ ಸಮನ್ಸ್‌ ನೀಡಿದ್ದರೂ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ವಿಚಾರಣೆಗೆ ಹಾಜರಾಗದಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ ಡಿ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ಬುಧವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.

ಇಂದು ಆದೇಶ ಪ್ರಕಟಿಸಿದ ರವೂಜ್‌ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶೆ ದಿವ್ಯಾ ಮಲ್ಹೋತ್ರಾ ಅವರು ಜಾರಿ ನಿರ್ದೇಶನಾಲಯದ ದೂರನ್ನು ಪರಿಗಣಿಸಲಾಗಿದ್ದು ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗುತ್ತಿದೆ ಎಂದರು.

ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ ಅವರು ನೀಡಿದ ದೂರಿನ ಮೇರೆಗೆ ಸಿಬಿಐ ಆಗಸ್ಟ್ 17, 2022ರಂದು ಪ್ರಕರಣ ದಾಖಲಿಸಿತ್ತು. ಬಳಿಕ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆಯಾದ ಆಯಾಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.

ಅಬಕಾರಿ ನೀತಿ ರೂಪಿಸುವ ಹಂತದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಸಿಸೋಡಿಯಾ ಹಾಗೂ ಇತರ ಎಎಪಿ ನಾಯಕರು ಅಪರಿಚಿತ ಮತ್ತು ಅನಾಮಧೇಯ ಖಾಸಗಿ ವ್ಯಕ್ತಿಗಳು ಇಲ್ಲವೇ ಸಂಸ್ಥೆಗಳೊಂದಿಗೆ ಸೇರಿ ಕ್ರಿಮಿನಲ್‌ ಪಿತೂರಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

ಅಬಕಾರಿ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಕೈಬಿಟ್ಟ ಅಥವಾ ಸೃಷ್ಟಿಸಲಾದ ನಿಬಂಧನೆಗಳಿಂದ ಈ ಪಿತೂರಿ ನಡೆದಿದೆ ಎಂದು ಆರೋಪಿಸಲಾಗಿತ್ತು. ಟೆಂಡರ್ ಪ್ರಕ್ರಿಯೆಯ ನಂತರ ಕೆಲವು ಪರವಾನಗಿದಾರರು ಮತ್ತು ಸಂಚುಕೋರರಿಗೆ ಅನುಕೂಲವಾಗುವಂತೆ ನೀತಿ ರೂಪಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಮದ್ಯ ತಯಾರಕರು, ಸಗಟು ವ್ಯಾಪಾರಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಲ್ಲಿ ಏಕಸ್ವಾಮ್ಯ ಮತ್ತು ಸಂಯೋಜನೆ ಉದ್ದೇಶಗಳನ್ನು ಸಾಧಿಸಲು ದಕ್ಷಿಣ ಭಾರತದ ಮದ್ಯ ವ್ಯವಹಾರದಲ್ಲಿ ಕೆಲ ವ್ಯಕ್ತಿಗಳು ಎಎಪಿಯ ಕೆಲ ನಾಯಕರಿಗೆ ಹವಾಲಾ ಮಾರ್ಗಗಳ ಮೂಲಕ ಕಿಕ್‌ಬ್ಯಾಕ್‌ ನೀಡಿದ್ದಾರೆ ಎಂದು ಸಿಬಿಐ ಮತ್ತು ಇಡಿ ತಿಳಿಸಿದ್ದವು.

Kannada Bar & Bench
kannada.barandbench.com