ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತಾನು ಶಾಮೀಲಾಗಿರುವುದನ್ನು ಸಾಬೀತುಪಡಿಸುವಂತಹ ಯಾವುದೇ ಸಾಕ್ಷ್ಯ ಸಿಬಿಐ ಬಳಿ ಇಲ್ಲ ಮತ್ತು ತನ್ನನ್ನು ಏಕಾಂಗಿಯಾಗಿ ಗುರಿಯಾಗಿಸಲಾಗಿದೆ ಎಂದು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಸಿಸೋಡಿಯಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರಿದ್ದ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸಿಸೋಡಿಯಾ ಪರವಾಗಿ ಹಿರಿಯ ನ್ಯಾಯವಾದಿ ದಯನ್ ಕೃಷ್ಣನ್ ವಾದ ಮಂಡಿಸಿದರು.
ಸಿಸೋಡಿಯಾ ಹೊರತುಪಡಿಸಿ ಪ್ರಕರಣದ ಎಲ್ಲಾ ಆರೋಪಿಗಳು ಬಿಡುಗಡೆಯಾಗಿದ್ದಾರೆ. ಅಧಿಕಾರಶಾಹಿಯ ಸ್ವಾರ್ಥಪರ ಹೇಳಿಕೆಗಳನ್ನು ಸಿಬಿಐ ಅವಲಂಬಿಸಿದ್ದು ತಾನು ಸಾಕ್ಷ್ಯ ತಿರುಚಿದ್ದೇನೆ ಎನ್ನಲು ಯಾವುದೇ ಪುರಾವೆಗಳಿಲ್ಲ ಎಂದರು.
ಈ ಮಧ್ಯೆ ಸಿಸೋಡಿಯಾ ಪರ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಮೋಹಿತ್ ಮಾಥುರ್ “ಸಿಬಿಐ ಮಾಡಿರುವ ಆರೋಪಗಳು ಕೇವಲ ಕಾಗದದ ಮೇಲಷ್ಟೇ ಇದ್ದು ಯಾವುದೇ ಹಣದ ಜಾಡು ಪತ್ತೆಯಾಗಿಲ್ಲ” ಎಂದರು.
ವಾದ ಆಲಿಸಿದ ನ್ಯಾಯಾಲಯ ಪ್ರಕರಣವನ್ನು ಬುಧವಾರಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ಸಿಬಿಐ ಪರ ವಾದ ಮಂಡಿಸಲಿದ್ದಾರೆ.