ಯಮುನಾ ನದಿ ಉಕ್ಕಿ ಹರಿದ ಪರಿಣಾಮ ನಗರದಲ್ಲಿ ತಲೆದೋರಿದ ಪ್ರವಾಹದ ಹಿನ್ನೆಲೆಯಲ್ಲಿ ಕೈಗೊಂಡ ಪರಿಹಾರ ಕಾರ್ಯಗಳನ್ನು ವಿವರಿಸುವ ಸ್ಥಿತಿಗತಿ ವರದಿ ಸಲ್ಲಿಸುವಂತೆ ಎಎಪಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ಸೂಚಿಸಿದೆ.
ಯಮುನಾ ಪ್ರವಾಹ ಪರಿಹಾರ ಶಿಬಿರದಲ್ಲಿರುವ ಜನರಿಗೆ ಉಚಿತ ಪಡಿತರ, ವೈದ್ಯಕೀಯ ನೆರವು, ನೈರ್ಮಲ್ಯ ವ್ಯವಸ್ಥೆ ಮತ್ತಿತರ ಅಗತ್ಯತೆಗಳನ್ನು ತಲುಪಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಯಮುನಾ ನದಿ ಪ್ರವಾಹ 1978ರಿಂದ ಈಚೆಗೆ ನಡೆದ ಅತ್ಯಂತ ವಿನಾಶಕಾರಿ ವಿಪತ್ತು ಎಂದು ಹೈಕೋರ್ಟ್ ಮೊರೆ ಹೋಗಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಆಕಾಶ್ ಭಟ್ಟಾಚಾರ್ಯ, ನಿರಾಶ್ರಿತರು ನೆಲೆಸಿರುವ ಪರಿಹಾರ ಶಿಬಿರಗಳಲ್ಲಿ ಮೂಲ ಸೌಕರ್ಯ ಕೊರತೆಯಿದೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಿದರು.
ದೆಹಲಿ ಸರ್ಕಾರದ ಪರ ಹಾಜರಿದ್ದ ಸ್ಥಾಯಿ ವಕೀಲ ಸಂತೋಷ್ ತ್ರಿಪಾಠಿ ಅವರು ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಮಾಧ್ಯಮಗಳಲ್ಲಿ ಅರ್ಜಿಯ ವಿವರಗಳು ಪ್ರಕಟವಾಗಿರುವುದಕ್ಕೆ ಆಕ್ಷೇಪಿಸಿದರು. ಇದು ಜನರ ಮನಸ್ಸಿನಲ್ಲಿ ಬೇರೆಯ ರೀತಿ ಬಿಂಬಿತವಾಗುತ್ತದೆ. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬಂತೆ ಈ ವರದಿಗಳಿವೆ. ಅರ್ಜಿದಾರರು ಅಧಿಕಾರಿಗಳನ್ನು ಸಂಪರ್ಕಿಸಿಲ್ಲ. ಸಂತ್ರಸ್ತರಿಗೆ ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅರ್ಜಿದಾರರ ಕಳಕಳಿ ನೈಜವಾಗಿದ್ದು ಈ ಹಂತದಲ್ಲಿ ಅರ್ಜಿಯನ್ನು ವಜಾಗೊಳಿಸುವುದಿಲ್ಲ ಎಂದು ಪೀಠ ತಿಳಿಸಿತು. ಸ್ಥಿತಿಗತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ಅದು ಸೆಪ್ಟೆಂಬರ್ 13, 2023ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿತು.