ಭೂಮಿ, ಪೊಲೀಸ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸೇವೆಗಳನ್ನು ಹೊರತುಪಡಿಸಿ ಭಾರತೀಯ ಆಡಳಿತ ಸೇವೆ (ಐಎಎಸ್) ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿನ ಎಲ್ಲಾ ಸೇವೆಗಳು ಹಾಗೂ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ನಿಯಂತ್ರಣ ಇದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ.
ರಾಜ್ಯಗಳಲ್ಲಿರುವ ಚುನಾಯಿತ ಸರ್ಕಾರಗಳ ಆಡಳಿತವನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಮೇ 11ರಂದು ಹೇಳಿತ್ತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಸರ್ವಾನುಮತದ ತೀರ್ಪು ನೀಡಿತ್ತು.
ತೀರ್ಪಿನಲ್ಲಿ “41ನೇ ನಮೂದಿನಡಿ ದೆಹಲಿ ರಾಷ್ಟ್ರ ರಾಜಧಾನಿ ಪ್ರದೇಶ ಸರ್ಕಾರದ ಶಾಸನಾತ್ಮಕ ಅಧಿಕಾರ ಸಾರ್ವಜನಿಕ ಆಡಳಿತ ಸೇವೆಗೂ (ಐಎಎಸ್) ವಿಸ್ತರಣೆಯಾಗುತ್ತದೆ. ಈ ಅಧಿಕಾರಿಗಳು ದೆಹಲಿ ಸರ್ಕಾರದಿಂದ ನೇಮಕಗೊಳ್ಳದಿದ್ದರೂ ಅವರ ಮೇಲೆ ಅದು ನಿಯಂತ್ರಣ ಹೊಂದಿದೆ. ಆದಾಗ್ಯೂ, ಇದು ಭೂಮಿ, ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸೇವೆಗಳಿಗೆ ಅನ್ವಯವಾಗುವುದಿಲ್ಲ. ಭೂಮಿ, ಪೊಲೀಸ್ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಹೊರತಾದ ಸೇವೆ ಹೊರತುಪಡಿಸಿ ಉಳಿದ ಆಡಳಿತಸೇವೆಗಳ ವಿಚಾರದಲ್ಲಿ ಲೆ. ಗವರ್ನರ್ ಅವರು ದೆಹಲಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಬದ್ಧರಾಗಿರುತ್ತಾರೆ” ಎಂದು ತಿಳಿಸಲಾಗಿತ್ತು.
ಕೇಂದ್ರ ಸರ್ಕಾರ ಇದೀಗ ಈ ಅಂಶವನ್ನು ಪ್ರಶ್ನಿಸಿದೆ. ದೆಹಲಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ವರ್ಗಾವಣೆ, ನಿಯುಕ್ತಿ ಹಾಗೂ ಶಿಸ್ತುಕ್ರಮ ಮೇಲ್ವಿಚಾರಣೆ ಮಾಡಲು ಕೇಂದ್ರ ಸರ್ಕಾರದಿಂದ ನಾಮನಿರ್ದೇಶನಗೊಂಡ ಲೆ. ಗವರ್ನರ್ ಅವರಿಗೆ ಅಧಿಕಾರ ನೀಡುವಂತೆ ರಾಷ್ಟ್ರಪತಿಗಳು ಸುಗ್ರೀವಾಜ್ಞೆ ಜಾರಿಗೊಳಿಸಿದ್ದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರದೆ ಇರಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ.