ದೆಹಲಿ ಅಧಿಕಾರ ಸಂಘರ್ಷ: ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಬೇಡಿಕೆ ಇಟ್ಟ ಕೇಂದ್ರ
ದೆಹಲಿಯಲ್ಲಿನ ಅಧಿಕಾರಿಗಳ ವರ್ಗಾವಣೆ ಮತ್ತು ನಿಯುಕ್ತಿ ಮತ್ತು ಅಧಿಕಾರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕೆಂದು ಕೇಂದ್ರ ಸರ್ಕಾರವನ್ನು ಕೋರುವ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆ ಬುಧವಾರ ಕುತೂಹಲಕಾರಿ ತಿರುವು ಪಡೆದುಕೊಂಡಿತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಂ ಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಹಾಗೂ ಪಿ ಎಸ್ ನರಸಿಂಹ ಅವರಿದ್ದ ಸಾಂವಿಧಾನಿಕ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಸಂವಿಧಾನದ 239 ಎಎ ವಿಧಿಯನ್ನು ಅರ್ಥೈಸಿ ಮತ್ತು ದೆಹಲಿ ಸರ್ಕಾರದ ಅಧಿಕಾರ ನಿಗದಿಗೊಳಿಸಿ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ 2018ರಲ್ಲಿ ನೀಡಿದ್ದ ತೀರ್ಪು ಈ ಹಿಂದೆ ಒಂಬತ್ತು ನ್ಯಾಯಮೂರ್ತಿಗಳ ಪೀಠ ನೀಡಿದ್ದ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್ ಜಿ) ತುಷಾರ್ ಮೆಹ್ತಾ ತಿಳಿಸಿದರು.
ದೇಶದ ರಾಜಧಾನಿ ಸಂಪೂರ್ಣ ಅರಾಜಕತೆಗೆ ದೂಡಿದವರಾಗಿ ಇತಿಹಾಸವು ಕೇಂದ್ರ ಸರ್ಕಾರವನ್ನು ನೆನಪಿಸಿಕೊಳ್ಳಬಾರದು. ದೆಹಲಿ ಸರ್ಕಾರ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಪ್ರಕಟವಾದ ತೀರ್ಪು, ದೆಹಲಿಯನ್ನು ಕೇಂದ್ರಾಡಳಿತ ಪ್ರದೇಶದಂತೆಯೇ ಇದೆ ಎಂದಿರುವ 1996ರ ಎನ್‌ಡಿಎಂಸಿ ಮತ್ತು ಪಂಜಾಬ್ ಸರ್ಕಾರ ನಡುವಣ ಪ್ರಕರಣದ ತೀರ್ಪಿಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿತು.
ಸಾಂವಿಧಾನಿಕ ಪೀಠ 2018ರ ತೀರ್ಪಿನಲ್ಲಿ, ಚುನಾಯಿತ ಸರ್ಕಾರದ ಪರಮಾಧಿಕಾರದ ತತ್ವವನ್ನು ಪ್ರತಿಪಾದಿಸಿತ್ತು ಸಚಿವ ಸಂಪುಟದ ಸಹಾಯ ಮತ್ತು ಸಲಹೆಯಿಲ್ಲದೆ ಲೆಫ್ಟಿನೆಂಟ್ ಗವರ್ನರ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ದೆಹಲಿ ಸರ್ಕಾರದೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ಆಗ ಹೇಳಿತ್ತು. ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ರಾಷ್ಟ್ರಪತಿಯವರಿಗೆ ಶಿಫಾರಸ್ಸು ಮಾಡಬೇಕು ಎಂದು ಅದು ತಿಳಿಸಿತ್ತು.
ಪ್ರೇಮ್ ಚಂದ್ ಜೈನ್ ಪ್ರಕರಣದಲ್ಲಿ ನೀಡಲಾದ ತೀರ್ಪಿನ ಕುರಿತಂತೆ ಎರಡು ಪುಟಗಳ ಟಿಪ್ಪಣಿ ಸಲ್ಲಿಸಲು ಎಸ್‌ಜಿ ಕೋರಿದಾಗ ಸುಪ್ರೀಂ ಕೋರ್ಟ್ ಅದನ್ನು ಮನ್ನಿಸಲಿಲ್ಲ.
ಕೇಂದ್ರ ಮತ್ತು ರಾಜ್ಯಗಳ ನಡುವಿನ ಒಕ್ಕೂಟ ವ್ಯವಸ್ಥೆಯ ಗಡಿಗಳನ್ನು ಮರು ವ್ಯಾಖ್ಯಾನಿಸುವ ಅಗತ್ಯವಿದೆ ಎಂದು ತುಷಾರ್ ಮೆಹ್ತಾ ಹೇಳಿದಾಗ ಸಿಜೆಐ ಚಂದ್ರಚೂಡ್ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ಕೇಂದ್ರದ ಮನವಿಯನ್ನು ದೆಹಲಿ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಕೂಡ ವಿರೋಧಿಸಿದರು. ತೀರ್ಪು ಬಂದ ಮೂರುವರೆ ವರ್ಷಗಳ ನಂತರ ಹಾಗೂ ವರ್ಷದಲ್ಲಿ ಕನಿಷ್ಠ ಹತ್ತು ವಿಚಾರಣೆಗಳು ಆದ ನಂತರ ಈಗ ಪರಿಶೀಲಿಸುವುದೇನಿದೆ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು

