ಕೋವಿಡ್: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳು, ಅಧಿಕಾರಿಗಳಿಗೆ ಅಶೋಕ ಹೋಟೆಲ್‌ನಲ್ಲಿ 100 ಕೊಠಡಿ ಮೀಸಲಿರಿಸಲು ಆದೇಶ

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೋವಿಡ್ ಆರೋಗ್ಯ ಸೌಕರ್ಯ ಒದಗಿಸುವಂತೆ ದೆಹಲಿ ಹೈಕೋರ್ಟ್ ಕೋರಿದ್ದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
Ashoka Hotel Delhi
Ashoka Hotel Delhi
Published on

ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ನಗರದ ಚಾಣಕ್ಯಪುರಿಯಲ್ಲಿರುವ ಅಶೋಕ ಹೋಟೆಲ್‌ನಲ್ಲಿ ಕೋವಿಡ್‌ ಆರೈಕೆ ಸೌಲಭ್ಯದೊಂದಿಗೆ 100 ಕೊಠಡಿಗಳನ್ನು ಮೀಸಲಿರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ದೆಹಲಿ ನ್ಯಾಯಾಲಯವೊಂದು ಆದೇಶಿಸಿದೆ.

ಚಾಣಕ್ಯಪುರಿಯ ಪ್ರೈಮಸ್ ಆಸ್ಪತ್ರೆ, ಹೋಟೆಲ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ತೆರೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಹೈಕೋರ್ಟ್‌ ನ್ಯಾಯಮೂರ್ತಿಗಳು ನ್ಯಾಯಾಂಗಾಧಿಕಾರಿಗಳಿಗೆ ಕೋವಿಡ್‌ ಆರೈಕೆ ಸೌಲಭ್ಯ ಕಲ್ಪಿಸುವಂತೆ ಉಪವಿಭಾಗೀಯ ಅಧಿಕಾರಿ (ಸಬ್‌ಡಿವಿಷನಲ್‌ ಮ್ಯಾಜಿಸ್ಟ್ರೇಟ್‌) ಗೀತಾ ಗ್ರೋವರ್‌ ಅವರಿಗೆ ಮನವಿ ಸಲ್ಲಿಸಿತ್ತು. ಅದರಂತೆ ಸೌಲಭ್ಯ ಒದಗಿಸಲು ಸರ್ಕಾರಕ್ಕೆ ಆದೇಶಿಸಲಾಗಿದೆ.

Also Read
ವಾರ ಮುಂಚಿತವಾಗಿ ಬೇಸಿಗೆ ರಜಾ ಕಾಲ ಆರಂಭಿಸಲು ಸುಪ್ರೀಂಗೆ ಮನವಿ; 60 ಹಾಸಿಗೆಗಳ ಕೋವಿಡ್‌ ಆಸ್ಪತ್ರೆಗೆ ಚಿಂತನೆ

ಆದೇಶದ ಪ್ರಮುಖ ಅಂಶಗಳು ಹೀಗಿವೆ:

  • ಜೈವಿಕ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡುವುದು ಆಸ್ಪತ್ರೆಯ ಜವಾಬ್ದಾರಿ.

  • ಹೋಟೆಲ್‌ ಸಿಬ್ಬಂದಿಗೆ ಎಲ್ಲಾ ರಕ್ಷಣಾತ್ಮಕ ಸಾಧನ ಒದಗಿಸಲಾಗುವುದು ಮತ್ತು ಅಗತ್ಯ ತರಬೇತಿ ನೀಡಲಾಗುವುದು.

  • ರೋಗಿಗಳ ಸ್ಥಳಾಂತರ ಸೌಲಭ್ಯಕ್ಕಾಗಿ ಪ್ರೈಮಸ್ ಆಸ್ಪತ್ರೆ ಆಂಬ್ಯುಲೆನ್ಸ್ ಒದಗಿಸಬೇಕು.

  • ಹೋಟೆಲ್ ಸಿಬ್ಬಂದಿ ಕೊರತೆ ಕಂಡುಬಂದರೆ ಆಸ್ಪತ್ರೆ ತನ್ನ ಸಿಬ್ಬಂದಿಯನ್ನು ಒದಗಿಸಬೇಕು.

  • ಕೊಠಡಿ, ಶುಚಿತ್ವ, ಸೋಂಕು ನಿವಾರಣೆ ಮತ್ತು ರೋಗಿಗಳಿಗೆ ಆಹಾರ ರೀತಿಯ ಸೇವೆಗಳನ್ನು ಹೋಟೆಲ್ ಒದಗಿಸುತ್ತದೆ.

  • ಶುಲ್ಕವನ್ನು ಆಸ್ಪತ್ರೆಯು ಸಂಗ್ರಹಿಸಿ ನಂತರ ಹೋಟೆಲ್‌ಗೆ ಪಾವತಿಸತಕ್ಕದ್ದು.

  • ದರಗಳನ್ನು ಪರಸ್ಪರ ನಿರ್ಧರಿಸಿದ ನಂತರ ಆಸ್ಪತ್ರೆ ತನ್ನ ವೈದ್ಯರು, ದಾದಿಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಸ್ವಂತ ಖರ್ಚಿನಲ್ಲಿ ನೇಮಿಸಿಕೊಳ್ಳಬಹುದು.

ಸೌಲಭ್ಯ ಒದಗಿಸುವ ಸಲುವಾಗಿ ನವದೆಹಲಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್ ಮೀನಾ ನೇತೃತ್ವದಲ್ಲಿ ಆಸ್ಪತ್ರೆ ಮತ್ತು ಹೋಟೆಲ್‌ ನಡುವೆ ಸಮನ್ವಯ ಕಾರ್ಯ ನಡೆಯಲಿದೆ. ಆದೇಶ ಪಾಲಿಸದಿದ್ದರೆ 2005ರ ವಿಪತ್ತು ನಿರ್ವಹಣಾ ಕಾಯಿದೆ, 1897ರ ಸಾಂಕ್ರಾಮಿಕ ರೋಗಗಳ ಕಾಯಿದೆ, ಹಾಗೂ ಭಾರತೀಯ ದಂಡ ಸಂಹಿತೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ವಿಭಾಗೀಯ ಅಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Kannada Bar & Bench
kannada.barandbench.com