ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸಮರ: ವಿಸ್ತೃತ ಪೀಠಕ್ಕೆ ಒಪ್ಪಿಸಲು ಸುಪ್ರೀಂ ಸಮ್ಮತಿ

ಪ್ರಕರಣವನ್ನು ಐದು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಲು ಕೋರಿರುವ ಕೇಂದ್ರ ಸರ್ಕಾರದ ಮನವಿಯನ್ನು ಪರಿಗಣಿಸುವ ಬಗ್ಗೆ ಚಿಂತಿಸುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಹೇಳಿದೆ.
ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಸಮರ: ವಿಸ್ತೃತ ಪೀಠಕ್ಕೆ ಒಪ್ಪಿಸಲು ಸುಪ್ರೀಂ ಸಮ್ಮತಿ
A1

ರಾಷ್ಟ್ರ ರಾಜಧಾನಿಯಲ್ಲಿನ ಆಡಳಿತಾತ್ಮಕ ಸೇವೆಗಳು ಐಎಎಸ್‌ ಅಧಿಕಾರಿಗಳ ಮೇಲಿನ ನಿಯಂತ್ರಣ ಕುರಿತಾದ ದೆಹಲಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ಕಾನೂನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪನ್ನು ಕಾಯ್ದಿರಿಸಿದೆ.

ಪ್ರಕರಣವನ್ನು ಐದು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಲು ಕೋರಿರುವ ಕೇಂದ್ರ ಸರ್ಕಾರದ ಮನವಿಯನ್ನು ಪರಿಗಣಿಸುವ ಬಗ್ಗೆ ಚಿಂತಿಸುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿತು.

ಒಂದು ವೇಳೆ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ಪೀಠಕ್ಕೆ ಉಲ್ಲೇಖಿಸಿದರೆ ಮೇ 15 ರೊಳಗೆ ವಾದ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ನ್ಯಾಯಾಲಯದ ರಜೆ ಅವಧಿಯನ್ನು ತೀರ್ಪು ನೀಡಲು ಬಳಸಿಕೊಳ್ಳಬಹುದು” ಎಂದಿತು. ದೆಹಲಿ ಸರ್ಕಾರದ ಪರ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರೆ, ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು.

Also Read
ರಾಷ್ಟ್ರ ರಾಜಧಾನಿ ವಲಯ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆ ಮಂಡನೆ; ದೆಹಲಿ ಸರ್ಕಾರ ಎಂದರೆ 'ಲೆಫ್ಟಿನೆಂಟ್‌ ಗವರ್ನರ್‌'

ಪ್ರಮುಖ ಅಧಿಕಾರಿಗಳ ಮೇಲೆ ಆಡಳಿತಾತ್ಮಕ ನಿಯಂತ್ರಣ ಸಾಧಿಸದಂತೆ ಕೇಂದ್ರ ಸರ್ಕಾರ ದೆಹಲಿಯ ಚುನಾಯಿತ ಸರ್ಕಾರವನ್ನು ಹೊರಗಿಟ್ಟಿದೆ. ಅಧಿಕಾರಿಗಳು ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರದ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂಬುದು ಸರ್ಕಾರದ ವಾದವಾಗಿದೆ.

ಸರ್ಕಾರ ಮತ್ತು ಲೆಫ್ಟಿನೆಂಟ್‌ ಗವರ್ನರ್‌ ನಡುವಿನ ಅಧಿಕಾರ ಸಮರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿವಿಧ ಅಂಶಗಳ ಕುರಿತು ಸುಪ್ರೀಂ ಕೋರ್ಟ್ ಏಪ್ರಿಲ್ 14, 2019 ರಲ್ಲಿ ತೀರ್ಪು ಪ್ರಕಟಿಸಿತ್ತು. ಆದರೂ ಪೀಠದ ಇಬ್ಬರು ನ್ಯಾಯಮೂರ್ತಿಗಳು ಸಂವಿಧಾನದ ಏಳನೇ ಶೆಡ್ಯೂಲ್‌ನ ಎರಡನೇ ಪಟ್ಟಿಯ 41ನೇ ನಮೂದಿನಡಿ ಬರುವ ʼಸೇವೆಗಳುʼ ಎನ್ನುವ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ದೆಹಲಿ ರಾಷ್ಟ್ರ ರಾಜಧಾನಿ ವಲಯಕ್ಕೆ ಅನ್ವಯಿಸುತ್ತದೆಯೇ ಇಲ್ಲವೇ ಎನ್ನುವ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಯಿತು.

2018ರಲ್ಲಿ, ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ರಾಷ್ಟ್ರ ರಾಜಧಾನಿ ವಲಯಕ್ಕೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಒಳಗೊಂಡ ಸಂವಿಧಾನದ 239ಎ ವಿಧಿಯನ್ನು ವ್ಯಾಖ್ಯಾನಿಸಿತ್ತು, ಆ ತೀರ್ಪಿನಲ್ಲಿ ನ್ಯಾಯಾಲಯ ಮಂತ್ರಿ ಮಂಡಳಿಯ ಸಹಾಯ ಮತ್ತು ಸಲಹೆಯಿಲ್ಲದೆ ಲೆಫ್ಟಿನೆಂಟ್‌ ಗವರ್ನರ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಜೊತೆಗೆ ದೆಹಲಿ ಸರ್ಕಾರದೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ತೀರ್ಪು ನೀಡಿತ್ತು.

ಸೇವೆಗಳು ಸೇರಿದಂತೆ ವೈಯಕ್ತಿಕ ಅಂಶಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಸಾಂವಿಧಾನಿಕ ಪೀಠದ ತೀರ್ಪಿನ ಆಧಾರದ ಮೇಲೆ ನಂತರ ತೀರ್ಪಿಗಾಗಿ ಸಾಮಾನ್ಯ ಪೀಠದ ಮುಂದೆ ಇರಿಸಲಾಯಿತು. ಸಾಮಾನ್ಯ ಪೀಠ 2019ರಲ್ಲಿ ತೀರ್ಪು ನೀಡಿತಾದರೂ ಇಬ್ಬರು ನ್ಯಾಯಮೂರ್ತಿಗಳ ಭಿನ್ನಾಭಿಪ್ರಾಯದಿಂದಾಗಿ ʼಸೇವೆಗಳುʼ ಎಂಬ ಸಮಸ್ಯೆ ಇತ್ಯರ್ಥವಾಗಲಿಲ್ಲ.

Related Stories

No stories found.
Kannada Bar & Bench
kannada.barandbench.com