ಹನಿಟ್ರ್ಯಾಪ್ ಪ್ರಕರಣವೊಂದನ್ನು ಆಲಿಸಿರುವ ದೆಹಲಿಯ ಹೈಕೋರ್ಟ್, ಹಣ ಸುಲಿಗೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದೆ. ಹಣ ಸುಲಿಗೆಕೋರರು ನೇಯ್ದ ಬಲೆಯಿಂದ ತಮ್ಮ ವಿರುದ್ಧ ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ ಎಂದು ವಾದಿಸಿದ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ (ಕಪಿಲ್ ಗುಪ್ತಾ ವರ್ಸಸ್ ದೆಹಲಿ ಸರ್ಕಾರ).
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯು ಸಿಆರ್‌ಪಿಸಿ ಸೆಕ್ಷನ್ 438ರ ಅಡಿ ಕೋರಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಹೊರಡಿಸಿತು.
ಆಪ್ತ ಸಹಾಯಕರ ಹುದ್ದೆಯ ಬಗ್ಗೆ ಚರ್ಚಿಸಲು ಫಿರ್ಯಾದುದಾರೆಯಿದ್ದ ಸ್ಥಳಕ್ಕೆ ಬಂದಾಗ ಅರ್ಜಿದಾರರು ತನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಫಿರ್ಯಾದುದಾರೆ ದೂರಿದ್ದಾರೆ. ಅರ್ಜಿದಾರರು ತನಗೆ ಮದ್ಯ ಸೇವಿಸುವಂತೆ ಮಾಡಿ, ಅತ್ಯಾಚಾರ ಎಸೆಗಿ, ಓಡಿ ಹೋಗಿದ್ದಕ್ಕೆ ನೆರೆ ಮನೆಯ ಜಾಸ್ಮಿನ್ ಸಾಕ್ಷಿ ಎಂದು ಆಕೆ ಆರೋಪಿಸಿದ್ದಾರೆ.
ಘಟನಾ ಸ್ಥಳದಲ್ಲಿ ಅರ್ಜಿದಾರರು ಇದ್ದರು ಎಂಬುದರ ಕುರಿತು ಯಾವುದೇ ತೆರನಾದ ತಕರಾರು ಇಲ್ಲ ಎಂದಿರುವ ಫಿರ್ಯಾದುದಾರೆ ಜಾಮೀನು ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇತ್ತ ಅನಾಮಿಕರಾದ ಮಹಿಳೆಯ ಮನೆಗೆ ಹೋಗುವ ಯಾವುದೇ ಅವಶ್ಯಕತೆ ಅರ್ಜಿದಾರರಿಗೆ ಇರಲಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ಘಟನೆ ನಡೆಯುವವರೆಗೆ ತಾನು ಮತ್ತು ಫಿರ್ಯಾದುದಾರೆ ಅನಾಮಿಕರಾಗಿದ್ದೆವು ಎಂದಿರುವ ಅರ್ಜಿದಾರ ತನ್ನ ಪ್ರಕಾರ ಘಟನೆಯನ್ನು ವಿವರಿಸಿದ್ದಾರೆ. ತಾನು ಆಪ್ತ ಸಹಾಯಕರ ಹುಡುಕಾಟ ನಡೆಸುತ್ತಿದ್ದಾಗ, ಫಿರ್ಯಾದುದಾರೆ ಆನ್‌ಲೈನ್ ಉದ್ಯೋಗ ಪೋರ್ಟಲ್‌ನಲ್ಲಿ ತನ್ನ ಸಂಪರ್ಕ ಸಂಖ್ಯೆ ಪಡೆದು ಘಟನೆ ನಡೆದ ದಿನದಂದು ಸಂದೇಶ ಕಳುಹಿಸಿದ್ದರು. ಮೂರು ನಿಮಿಷಗಳ ಚಾಟ್ ಬಳಿಕ ಫಿರ್ಯಾದುದಾರೆ ವೃತ್ತಿಪರ ಧಿರಿಸು ಧರಿಸಿರುವ ಫೋಟೊದ ಬದಲು ತಮ್ಮ ಮಾದಕ ಭಂಗಿಯ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದರು ಎಂದು ಅರ್ಜಿದಾರ ವಿವರಿಸಿದ್ದಾರೆ.
ಅದೇ ದಿನ ಫಿರ್ಯಾದುದಾರೆ ಅರ್ಜಿದಾರರನ್ನು ತನ್ನ ಮನೆಗೆ ಮದ್ಯಪಾನ ತೆಗೆದುಕೊಂಡು ಬರುವಂತೆ ಆಹ್ವಾನಿಸಿದರು. ಫಿರ್ಯಾದುದಾರೆ ಸುದೀರ್ಘವಾದ ಸಂಬಂಧಕ್ಕೆ ಬದ್ಧವಾಗಿರುವುದಾಗಿ ಮತ್ತು ದೈಹಿಕ ಸಂಬಂಧ ಹೊಂದಲು ಯಾವುದೇ ಸಮಸ್ಯೆಯಿಲ್ಲ ಎಂಬ ಸೂಚನೆ ನೀಡಿದ್ದಾಗಿ ಅರ್ಜಿದಾರರು ವಿವರಿಸಿದ್ದಾರೆ.
ಫಿರ್ಯಾದುದಾರೆ ₹5 ಲಕ್ಷ ಬೇಡಿಕೆ ಇಟ್ಟಿದ್ದರು. ಇದನ್ನು ನೀಡಲು ಅರ್ಜಿದಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಕಲ್ಪಿತ, ಸುಳ್ಳುಗಳಿಂದ ಕೂಡಿದ ಮತ್ತು ಕಟ್ಟುಕತೆ ಆಧರಿಸಿದ ಅತ್ಯಾಚಾರ ಪ್ರಕರಣ ದಾಖಲಿಸಿದರು ಎಂದು ಆರೋಪಿಸಿದ್ದಾರೆ. ತನ್ನ ಕಕ್ಷಿದಾರರನ್ನು ಸುರಕ್ಷಿತವಾಗಿ ಹೆಣೆದ ಮೋಸದ ಬಲೆಯಲ್ಲಿ ಹಣ ಸುಲಿಗೆಕೋರರು ಕೆಡವಿದ್ದಾರೆ ಎಂದು ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ವಿಕಾಸ್ ಪಹ್ವಾ ವಾದಿಸಿದ್ದಾರೆ.
ಅರ್ಜಿದಾರರನ್ನು ಮತ್ತಷ್ಟು ಮುಕ್ತವಾಗಿಸುವ ಉದ್ದೇಶದಿಂದ ಹಾಗೂ ಆ ಬಳಿಕ ಅವರನ್ನು ಖೆಡ್ಡಾಕ್ಕೆ ಬೀಳಿಸಲು ಫಿರ್ಯಾದುದಾರೆ ಮಾದಕ ಭಂಗಿಯಲ್ಲಿ ತೆಗೆಸಿಕೊಂಡಿದ್ದ ಚಿತ್ರಗಳನ್ನು ಕಳುಹಿಸಿದ್ದಾರೆ. ಫಿರ್ಯಾದುದಾರೆ ವಾದಿಸಿರುವಂತೆ ನೆರೆಯಾಕೆಯ ಹೆಸರು ಜಾಸ್ಮಿನ್ ಅಲ್ಲ. ಅವರ ಹೆಸರು ಭಾವನಾ ಠಾಕೂರ್. ಇವರು ಫಿರ್ಯಾದುದಾರೆಯ ಆತ್ಮೀಯ ಸ್ನೇಹಿತರಾಗಿದ್ದು, ಸಂಚಿನ ಸಹಭಾಗಿ ಎಂದು ವಾದಿಸಿದ್ದಾರೆ.
ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯವು “ವೈಯಕ್ತಿಕವಾಗಿ ಪ್ರಕರಣದ ಬಗ್ಗೆ ಗಮನಹರಿಸುವಂತೆ” ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದು, ಫಿರ್ಯಾದುದಾರೆ ಮತ್ತು ಆಕೆಯ ನೆರೆಯವರು ಇಂಥದ್ದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಿದೆ.
ಅರ್ಜಿದಾರರ ಪರ ವಿಕಾಸ್ ಪಹ್ವಾ ಜೊತೆ ವಕೀಲರಾದ ಸಿಮ್ರನ್ ಜ್ಯೋತ್ ಸಿಂಗ್ ಖಂಡಾಪುರ್, ವರುಣ್ ಸಿಂಗ್, ಕಮಲೇಶ್ ಆನಂದ್, ಸುಮೇರ್ ಬೋಪರೈ, ರುಚಿಕಾ ವಧ್ವಾನ್, ರವಿ ಶರ್ಮಾ ಭಾಗವಹಿಸಿದ್ದರೆ, ಹೆಚ್ಚುವರಿ ಸರ್ಕಾರಿ ಅಭಿಯೋಜಕ ಪಿ ಎಲ್ ಶರ್ಮಾ ಅವರು ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದರು.