ಖಲಿಸ್ತಾನ ಚಳವಳಿಗೆ ಉತ್ತೇಜನ ನೀಡಿದ್ದಕ್ಕಾಗಿ ಟ್ವಿಟರ್ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಂಗೀಕರಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳ ಅರ್ಹತೆ ಕುರಿತು ಪ್ರತಿಕ್ರಿಯಿಸದೆ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸುಬ್ರಮಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು ಅರ್ಜಿದಾರರಾದ ಸಂಗೀತಾ ಶರ್ಮ ಅವರು ಕೇಂದ್ರ ಸರ್ಕಾರದ ಮುಂದೆ ಕೋರಿಕೆ ಸಲ್ಲಿಸಿರಲಿಲ್ಲ ಎಂಬ ವಿಷಯದಲ್ಲಿ ಮಧ್ಯಪ್ರವೇಶಿಸಲು ಸಮ್ಮತಿ ಸೂಚಿಸಲಿಲ್ಲ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇಶ್ ರತನ್ ನಿಗಮ್ ಅವರಿಗೆ ನ್ಯಾಯಾಲಯ, ‘ವಿಚಾರವೊಂದು ಸಾರ್ವಜನಿಕ ಹಿತಾಸಕ್ತಿ ಹೊಂದಿದೆ ಎಂದು ನೀವು ಹೇಳಿದ ಮಾತ್ರಕ್ಕೆ ಮೊದಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬಾರದು ಎಂದೇನೂ ಅಲ್ಲ’ ಎಂದಿತು.
ಸಂಸದ ಅನಂತಕುಮಾರ್ ಹೆಗಡೆ ಅವರು ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ನಿಗಮ್ ಅವರು ಗಮನ ಸೆಳೆದಾಗ, 'ಅರ್ಜಿದಾರರು ಸಮಸ್ಯೆಯ ಕುರಿತು ಕೇಂದ್ರ ಸರ್ಕಾರದ ಮುಂದೆ ಮನವಿಯನ್ನು ಸಲ್ಲಿಸದೆ ನಾವು ಈ ಅರ್ಜಿಯನ್ನು ಆಲಿಸಲು ಸಾಧ್ಯವಿಲ್ಲ' ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
‘ನ್ಯಾಯಾಲಯವನ್ನು ಸಂಪರ್ಕಿಸುವ ಮೊದಲು ಸರ್ಕಾರದ ಮುಂದೆ ವಿಷಯ ಮಂಡಿಸಬೇಕಿತ್ತು. ಸಾಮಾಜಿಕ ಮಾಧ್ಯಮಗಳ ನಿಯಂತ್ರಣಕ್ಕಾಗಿ ರೂಪುರೇಷೆಗಳು ತಯಾರಾಗುತ್ತಿವೆ’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಪ್ರಕರಣದ ಕುರಿತಾಗಿ ಪೀಠಕ್ಕೆ ತಿಳಿಸಿದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಸ್ವಾತಂತ್ರ್ಯದೊಂದಿಗೆ ಪಿಐಎಲ್ ಹಿಂಪಡೆಯುತ್ತಿರುವುದಾಗಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿತು.