ವಿವಾದಿತ ದೇವಮಾನವ ಅಸಾರಾಂ ಬಾಪು ಕುರಿತು ರಚಿಸಲಾಗಿರುವ ‘ಗನ್ನಿಂಗ್ ಫಾರ್ ದ ಗಾಡ್ ಮ್ಯಾನ್: ದ ಟ್ರೂ ಸ್ಟೋರಿ ಬಿಹೈಂಡ್ ಅಸಾರಾಂ ಬಾಪೂಸ್ ಕನ್ವಿಕ್ಷನ್’ ಪುಸ್ತಕ ಪ್ರಕಟಣೆಯ ಮೇಲೆ ವಿಧಿಸಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಮಂಗಳವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ (ಹಾರ್ಪರ್ ಕಾಲಿನ್ಸ್ ವರ್ಸಸ್ ಸಂಚಿತಾ).
ಅಸಾರಾಂ ಬಾಪು ಅತ್ಯಾಚಾರ ಪ್ರಕರಣದಲ್ಲಿ ಸಹ ಅಪರಾಧಿಯಾಗಿರುವ ಸಂಚಿತಾ ಮನವಿ ಆಧರಿಸಿ ಜಿಲ್ಲಾ ನ್ಯಾಯಾಲಯ ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆ ಪ್ರಶ್ನಿಸಿ ಹಾರ್ಪರ್ ಕಾಲಿನ್ಸ್ ಸಂಸ್ಥೆಯು ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ನ್ಯಾ. ನಜ್ಮಿ ವಜೀರಿ ಅವರಿದ್ದ ಏಕಸದಸ್ಯ ಪೀಠವು ತಡೆಯಾಜ್ಞೆ ತೆರವುಗೊಳಿಸಿತು.
ವಿಚಾರಾಣಾಧೀನ ನ್ಯಾಯಾಲಯದ ತೀರ್ಪು ಆಧರಿಸಿ ಪುಸ್ತಕ ರಚಿಸಲಾಗಿದ್ದು, ಅದರ ಕುರಿತು ಮೇಲ್ಮನವಿ ಸಲ್ಲಿಸಲಾಗಿದೆ ಎಂಬ ಅಂಶವನ್ನು ಈಗಾಗಲೇ ಮುದ್ರಿಸಲಾಗಿರುವ ಪುಸ್ತಕಗಳ ಮೇಲೆ ಅಂಟಿಸಿ ಮಾರಾಟ ಮಾಡಬೇಕು. ಆನ್ ಲೈನ್ ಮಾರಾಟದಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಹಕ್ಕುತ್ಯಾಗ (ಡಿಸ್ಕ್ಲೈಮರ್) ಪ್ರಕಟಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ವಿಚಾರಾಣಾಧೀನ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಸಾರಾಂ ಬಾಪು ಮೇಲ್ಮನವಿ ಸಲ್ಲಿಸಿದ್ದಾರೆ.
ಪುಸ್ತಕದಲ್ಲಿನ ಆರೋಪಿತ ಮಾನಹಾನಿ ವಿಚಾರಗಳು ವಿಚಾರಾಣಾಧೀನ ನ್ಯಾಯಾಲಯದ ದಾಖಲೆ ಮತ್ತು ತೀರ್ಪು ಆಧರಿಸಿವೆ. ಪುಸ್ತಕದ ಮೇಲೆ ಪ್ರಕಟ ಪೂರ್ವ ನಿಷೇಧ ಹೇರುವಾಗ ಎಚ್ಚರಿಕೆ ವಹಿಸಬೇಕು. ಸದರಿ ಪ್ರಕರಣದಲ್ಲಿ ಅದರ ಅಗತ್ಯ ಉದ್ಭವಿಸಿಲ್ಲ. ಆದ್ದರಿಂದ ತಡೆಯಾಜ್ಞೆ ವಜಾಗೊಳಿಸಬೇಕು ಎಂದು ಹಾರ್ಪರ್ ಕಾಲಿನ್ಸ್ ವಾದಿಸಿತ್ತು.
ಜುಲೈನಲ್ಲೇ ಪುಸ್ತಕ ಪ್ರಕಟಣೆಯ ಕುರಿತು ಸಾರ್ವಜನಿಕವಾಗಿ ಘೋಷಣೆ ಮಾಡಲಾಗಿದೆ. ಆದರೆ, ದುರುದ್ದೇಶದಿಂದ ಪುಸ್ತಕ ಪ್ರಕಟಣೆಯ ಕೊನೆಯವರೆಗೆ ಕಾದು ಸಹ ಅಪರಾಧಿಯಾದ ಸಂಚಿತಾ ತಡೆಯಾಜ್ಞೆ ಪಡೆದಿದ್ದಾರೆ ಎಂದು ಹಾರ್ಪರ್ ಕಾಲಿನ್ಸ್ ದೂರಿದೆ.
ರಾಜಸ್ಥಾನ ಹೈಕೋರ್ಟ್ ನಲ್ಲಿ ಅತ್ಯಾಚಾರ ಪ್ರಕರಣದ ತೀರ್ಪು ಮರುಪರಿಶೀಲನೆ ಕೋರಿರುವುದರಿಂದ ಸದರಿ ಪ್ರಕರಣವು ಅರೆ ನ್ಯಾಯಿಕ ವಿಚಾರವಾಗಿದೆ ಎಂದು ಪುಸ್ತಕ ಪ್ರಕಟಣೆಗೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ತಡೆಯಾಜ್ಞೆ ವಿಧಿಸಿತ್ತು.