ಗಂಗಾ-ಯಮುನಾ ನಡುವಿನ ಭೂಮಿ ಒಡೆತನ ತನ್ನದು ಎಂದ ವ್ಯಕ್ತಿಗೆ ₹10,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್

ಗಮನಾರ್ಹ ವಿಚಾರ ಎಂದರೆ ಕುತುಬ್ ಮಿನಾರ್ ಮಾಲೀಕತ್ವ ತನಗೆ ಒಪ್ಪಿಸಬೇಕು ಎಂದು ಕೋರಿ ದೆಹಲಿಯ ಸಾಕೇತ್ ನ್ಯಾಯಾಲಯಕ್ಕೆ ಈ ಹಿಂದೆ ಸಿಂಗ್ ಮನವಿ ಸಲ್ಲಿಸಿದ್ದರು. ಆದರೆ ಸೆಪ್ಟೆಂಬರ್ 20, 2022 ನ್ಯಾಯಾಲಯ ಈ ಮನವಿ ತಿರಸ್ಕರಿಸಿತ್ತು.
ಗಂಗಾ-ಯಮುನಾ ನಡುವಿನ ಭೂಮಿ ಒಡೆತನ ತನ್ನದು ಎಂದ ವ್ಯಕ್ತಿಗೆ ₹10,000 ದಂಡ ವಿಧಿಸಿದ ದೆಹಲಿ ಹೈಕೋರ್ಟ್
Published on

ಪ್ರಸಕ್ತ ಆಗ್ರಾ, ಮೀರತ್, ಅಲಿಗಢ, ದೆಹಲಿ, ಗುರುಗ್ರಾಮ ಹಾಗೂ ಉತ್ತರಾಖಂಡಕ್ಕೆ ಸೇರಿರುವ 65 ಕಂದಾಯ ಪ್ರದೇಶಗಳ ಜಮೀನು ಮಾಲೀಕತ್ವ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಮಂಗಳವಾರ ₹10,000 ದಂಡ ವಿಧಿಸಿದೆ [ಕುಂವರ್‌ ಮಹೇಂದ್ರ ಧ್ವಜ್ ಪ್ರಸಾದ್ ಸಿಂಗ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ತಾನು ಭಾರತ ಒಕ್ಕೂಟದೊಂದಿಗೆ ಎಂದಿಗೂ ವಿಲೀನಗೊಳ್ಳದ ಬೆಸ್ವಾನ್‌ ಅವಿಭಾಜ್ಯ ರಾಜ್ಯದ ಉತ್ತರಾಧಿಕಾರಿ ಎಂದು ಕುನ್ವರ್ ಮಹೇಂದರ್ ಧ್ವಜ್ ಪ್ರಸಾದ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಇಂದಿಗೂ, ತಮ್ಮ ಕುಟುಂಬ ರಾಜಪ್ರಭುತ್ವದ ಸ್ಥಾನಮಾನವನ್ನು ಹೊಂದಿದ್ದು ತಮ್ಮ ಒಡೆತನದ ಪ್ರದೇಶಗಳನ್ನು ಎಂದಿಗೂ ಭಾರತ ಸರ್ಕಾರಕ್ಕೆ ವರ್ಗಾಯಿಸಿಲ್ಲ ಎಂದು ಅವರು ಪ್ರತಿಪಾದಿಸಿದ್ದರು.

Also Read
ಕುತುಬ್ ಮಿನಾರ್ ಜಮೀನು ಒಡೆತನ: ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ

ಬೆಸ್ವಾನ್‌ನ ಸಾರ್ವಭೌಮ ರಾಜ್ಯವಾದ ʼಬೆಸ್ವಾ ಅವಿಭಾಜ್ಯ್‌ ರಾಜ್ಯ್‌ʼದೊಂದಿಗೆ ಔಪಚಾರಿಕವಾಗಿ ವಿಲೀನ ಪ್ರಕ್ರಿಯೆ ನಡೆಸಲು ಮತ್ತು 1950 ರಿಂದ ಈ ಭೂಮಿಗಾಗಿ ಸಂಗ್ರಹಿಸಲಾದ ಆದಾಯವನ್ನು ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅವರು ಕೋರಿದ್ದರು.

ಅಧಿಕೃತ ವಿಲೀನ ಕಾರ್ಯ ನಡೆಯುವವರೆಗೆ ತನ್ನ ಪ್ರದೇಶದಲ್ಲಿ ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದೂ ಅವರು ವಿನಂತಿಸಿದ್ದರು.

ಅರ್ಜಿದಾರರು ಕೆಲವು ನಕ್ಷೆ ಮತ್ತು ಲೇಖನಗಳನ್ನಷ್ಟೇ ಸಲ್ಲಿಸಿದ್ದು ಅವು ಬೆಸ್ವಾನ್‌ ಕುಟುಂಬದ ಅಸ್ತಿತ್ವವವನ್ನು ಸೂಚಿಸುವುದಿಲ್ಲ ಅಥವಾ ಹೇಳಲಾದ ರಾಜಪ್ರಭುತ್ವದ ಉತ್ತರಾಧಿಕಾರಿಯಾಗಲು ಅರ್ಜಿದಾರರಿಗೆ ಯಾವ ರೀತಿಯ ಹಕ್ಕಿದೆ ಎಂಬುದನ್ನು ತಿಳಿಸುವುದಿಲ್ಲ ಎಂದು ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರು ತಿಳಿಸಿದರು.

ಅರ್ಜಿ ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದ್ದು ಕಾನೂನು ಪ್ರಕ್ರಿಯೆ ದುರುಪಯೋಗ ಮಾಡಿಕೊಂಡಿರುವುದು ಮಾತ್ರವಲ್ಲದೆ ನ್ಯಾಯಾಲಯದ ಸಮಯ ಹಾಳುಗೆಡವಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅರ್ಜಿಯನ್ನು ಸಂಪೂರ್ಣ ತಪ್ಪು ಗ್ರಹಿಕೆಯಿಂದ ಕೂಡಿದೆ, ಕಾನೂನಿನ ಪ್ರಕ್ರಿಯೆಯ ದುರುಪಯೋಗ ಮತ್ತು ನ್ಯಾಯಾಂಗದ ಸಮಯವನ್ನು ಸಂಪೂರ್ಣವಾಗಿ ವ್ಯರ್ಥ ಮಾಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ತೀರ್ಪುಗಳು, ವಿಕಿಪೀಡಿಯಾ ವರದಿ, ಭಾರತದ ರಾಜಕೀಯ ಏಕೀಕರಣದ ದಾಖಲೆಗಳು, ವಿಲೀನದ ದಾಖಲೆಗಳು ಕೂಡ ಅರ್ಜಿದಾರರ ವಾದವನ್ನು ಸಮರ್ಥಿಸುವುದಿಲ್ಲ, ”ಎಂದ ನ್ಯಾಯಾಲಯ ಮನವಿಯನ್ನು ವಜಾಗೊಳಿಸಿತು. ಜೊತೆಗೆ ನಾಲ್ಕು ವಾರಗಳ ಒಳಗಾಗಿ ಸಶಸ್ತ್ರ ಪಡೆಗಳ ಯುದ್ಧದಲ್ಲಿ ಮಡಿದವರ ಕಲ್ಯಾಣ ನಿಧಿಗೆ ₹ 10,000 ಹಣ ಠೇವಣಿ ಇಡುವಂತೆ ಸಿಂಗ್ ಅವರಿಗೆ ಆದೇಶಿಸಿತು.

ಗಮನಾರ್ಹ ವಿಚಾರ ಎಂದರೆ ಕುತುಬ್‌ ಮಿನಾರ್‌ ಮಾಲೀಕತ್ವ ತನಗೆ ಒಪ್ಪಿಸಬೇಕು ಎಂದು ಕೋರಿ ದೆಹಲಿಯ ಸಾಕೇತ್‌ ನ್ಯಾಯಾಲಯಕ್ಕೆ ಈ ಹಿಂದೆ ಸಿಂಗ್‌ ಮನವಿ ಸಲ್ಲಿಸಿದ್ದರು. ಆದರೆ ಸೆಪ್ಟೆಂಬರ್ 20, 2022 ನ್ಯಾಯಾಲಯ ಈ ಮನವಿ ತಿರಸ್ಕರಿಸಿತ್ತು.

Kannada Bar & Bench
kannada.barandbench.com