ಮನೆ ಖರೀದಿದಾರನಿಗೆ ತೀವ್ರ ಮಾನಸಿಕ ಸಂಕಷ್ಟ: ಕೇಂದ್ರದ ಅಂಗಸಂಸ್ಥೆ ಎನ್‌ಬಿಸಿಸಿಗೆ ದೆಹಲಿ ಹೈಕೋರ್ಟ್ ₹ 5 ಲಕ್ಷ ದಂಡ

ಜೀವನದಲ್ಲಿ ಉಳಿತಾಯ ಮಾಡಿ ಮನೆ ಖರೀದಿಸಲು ಹೊರಟ ಖರೀದಿದಾರರನ್ನು ಅಲ್ಲಿಂದಿಲ್ಲಿಗೆ ಅಲೆಯುವಂತೆ ಮಾಡಿದ ಶ್ರೇಷ್ಠ ಪ್ರಕರಣ ಇದಾಗಿದೆ ಎಂದು ಪೀಠ ಕುಟುಕಿತು.
ಮನೆ ಖರೀದಿದಾರನಿಗೆ ತೀವ್ರ ಮಾನಸಿಕ ಸಂಕಷ್ಟ: ಕೇಂದ್ರದ ಅಂಗಸಂಸ್ಥೆ ಎನ್‌ಬಿಸಿಸಿಗೆ ದೆಹಲಿ ಹೈಕೋರ್ಟ್ ₹ 5 ಲಕ್ಷ ದಂಡ

ಮನೆ ಖರೀದಿದಾರನಿಗೆ ತೀವ್ರ ಮಾನಸಿಕ ಸಂಕಟ ಉಂಟುಮಾಡಿದ ಕಾರಣಕ್ಕೆ ಆತನಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮವಾದ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ (ಎನ್‌ಬಿಸಿಸಿ) ₹ 5 ಲಕ್ಷ ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ಸಂಜಯ್ ರಘುನಾಥ್ ಪಿಪ್ಲಾನಿ ಇನ್ನಿತರರು ಮತ್ತು ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಮತ್ತಿತರರ ನಡುವಣ ಪ್ರಕರಣ].

ಕಟ್ಟಡ ಯೋಜನೆಯ ಕಾಮಗಾರಿಯಲ್ಲಿ ದೋಷಗಳು ಕಂಡುಬಂದಿದ್ದರೂ ಮನೆ ಖರೀದಿದಾರ ಹೂಡಿಕೆ ಮಾಡಿದ್ದ  ಹಣವನ್ನು ಎನ್‌ಬಿಸಿಸಿ ಬಡ್ಡಿಸಹಿತ ಹಿಂತಿರುಗಿಸದೆ ಇರುವುದರಿಂದ ಮನೆ ಖರೀದಿದಾರರಿಗೆ ಮಾನಸಿಕ ತೊಂದರೆ ಉಂಟಾಗಿದೆ ಎಂದು ನ್ಯಾ. ಸುಬ್ರಮೊಣಿಯಂ ಪ್ರಸಾದ್‌ ತಿಳಿಸಿದ್ದಾರೆ.

ಸ್ವಾಧೀನ ಪ್ರಮಾಣಪತ್ರವನ್ನು ನೀಡಿದ ವರ್ಷವಾದ 2021ರ ಜನವರಿ 30 ರಿಂದ ಶೇ 12ರ ಬಡ್ಡಿದರದಲ್ಲಿ ಮನೆ ಖರೀದಿದಾರರು ಪಾವತಿಸಿದ ಇಡೀ  ₹ 76 ಲಕ್ಷ ಮೊತ್ತವನ್ನು ಮರುಪಾವತಿಸುವಂತೆ ನ್ಯಾಯಾಲಯ ಎನ್‌ಬಿಸಿಸಿಗೆ ನಿರ್ದೇಶನ ನೀಡಿತು.

ಜೀವನದಲ್ಲಿ ಉಳಿತಾಯ ಮಾಡಿ ಮನೆ ಖರೀದಿಸಲು ಹೊರಟ ಖರೀದಿದಾರರನ್ನು ಅಲೆಯುವಂತೆ ಮಾಡಿದ ಶ್ರೇಷ್ಠ ಪ್ರಕರಣ ಇದಾಗಿದೆ ಎಂದು ಈ ಸಂದರ್ಭದಲ್ಲಿ ಪೀಠ ಕುಟುಕಿತು.    

ಸಾರ್ವಜನಿಕ ವಲಯದ ಉದ್ಯಮವಾದ ಎನ್‌ಬಿಸಿಸಿಯ ನಿಲುವು ದುರದೃಷ್ಟಕರ ಎಂದು ಅದು ಹೇಳಿದೆ ಆರ್ಜಿದಾರರಂತಹ ಮನೆ ಖರೀದಿದಾರರು ಮನೆ ಇಲ್ಲದೆ ಜೀವನಪೂರ್ತಿ ಉಳಿತಾಯ ಮಾಡಿದ ಹಣವೂ ಇಲ್ಲದೆ ಇರುವುದರಿಂದ ಅವರು ಬೆಂಬಿಡದೆ ಹೋರಾಟ ನಡೆಸಬೇಕಾದ ಸ್ಥಿತಿ ಇದೆ ಎಂದು ನ್ಯಾಯಾಲಯ ಹೇಳಿತು.

2017 ರಲ್ಲಿ ಫ್ಲ್ಯಾಟ್‌ ಖರೀದಿದಾಗಿ ಪೂರ್ಣ ಮೊತ್ತವನ್ನು ಪಾವತಿಸಲಾಗಿತ್ತು. ಆದರೆ ಎನ್‌ಬಿಸಿಸಿ ನಿರ್ಮಿಸಿದ ಕಟ್ಟಡದಲ್ಲಿ ರಚನಾತ್ಮಕ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಮನೆ ಖರೀದಿದಾರರು ಕಂಗಾಲಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.  

ಮನೆ ಖರೀದಿದಾರರು ಪಾವತಿಸಿದ ಹಣಕ್ಕೆ ಬಡ್ಡಿ ಪಾವತಿಸುವುದನ್ನು ಎನ್‌ಬಿಸಿಸಿ ನಿರಾಕರಿಸುವಂತಿಲ್ಲ ಮತ್ತು ಇಂತಹ ಕೃತ್ಯಗಳ ಕುರಿತಂತೆ ನಿರ್ದಾಕ್ಷಿಣ್ಯವಾಗಿ ವರ್ತಿಸುವ ಅಗತ್ಯವಿದೆ ಎಂದು ನ್ಯಾಯಾಲಯ ತಿಳಿಸಿತು.  

ಒಬ್ಬ ವ್ಯಕ್ತಿ ಇಲ್ಲವೇ ಕುಟುಂಬ ತನ್ನ ಜೀವಿತಾವಧಿಯಲ್ಲಿ ಮಾಡುವ ಅತ್ಯಂತ ಮಹತ್ವದ ಹೂಡಿಕೆಗಳಲ್ಲಿ ಮನೆ ಖರೀದಿಯೂ ಒಂದಾಗಿದ್ದು ವರ್ಷಗಳ ಕಾಲ ಮಾಡಿದ ಉಳಿತಾಯ, ಕರಾರುವಕ್ಕಾದ ಯೋಜನೆ ಹಾಗೂ ಭಾವನಾತ್ಮಕತೆಯನ್ನೂ ಇದು ಒಳಗೊಂಡಿರುತ್ತದೆ. ಹಾಗಾಗಿ  ಅನ್ಯಾಯಕ್ಕೊಳಗಾದ ಮನೆ ಖರೀದಿದಾರರಿಗೆ ಪರಿಹಾರ ನೀಡುವುದು ಕೇವಲ ಹಿಂದಿನ ಅನ್ಯಾಯಗಳನ್ನು ಸರಿಪಡಿಸುವ ವಿಚಾರವಷ್ಟೇ ಆಗಿರದೆ ಭವಿಷ್ಯದಲ್ಲಿ ನಡೆಯಬಹುದಾದ  ದುಷ್ಕೃತ್ಯ  ತಡೆಯುವ ಬಗೆಯೂ ಆಗಿದೆ”ಎಂದು ನ್ಯಾ. ಪ್ರಸಾದ್‌ ಹೇಳಿದರು.

ರಾಷ್ಟ್ರ ರಾಜಧಾನಿಯೂ ಆಗಿರುವ ದೆಹಲಿಯಲ್ಲಿ ಭೂಮಿಯ ಬೆಲೆ ಹೆಚ್ಚಳವಾಗುತ್ತಲೇ ಇದ್ದು ಬಡ್ಡಿಯಿಲ್ಲದೆ ಎನ್‌ಬಿಸಿಸಿ ಅಸಲು ಮೊತ್ತ ನೀಡುವುದು ಕಾನೂನು ದೃಷ್ಟಿಯಲ್ಲಿ ಸೂಕ್ತ ಎಂದು ಹೇಳಲಾಗದು. ಎನ್‌ಬಿಸಿಸಿ ಸರ್ಕಾರದ ಅಂಗವಾಗಿದ್ದು ಸಮಂಜಸ ಮತ್ತು ನ್ಯಾಯಯುತವಾಗಿ ಕೆಲಸ ಮಾಡುವ ಕರ್ತವ್ಯ ಅದರದ್ದಾಗಿದೆ ಎಂದ ನ್ಯಾಯಾಲಯ ತಮಗೆ ಬೇಕಾದ ತೀರ್ಪು ಪಡೆಯುವುದಕ್ಕಾಗಿ ನಿರ್ದಿಷ್ಟ ನ್ಯಾಯಮೂರ್ತಿಗಳ ಮುಂದೆ ಪ್ರಕರಣವನ್ನು ಪಟ್ಟಿ ಮಾಡಲು (ಫೋರಂ ಶಾಪಿಂಗ್‌) ಅರ್ಜಿದಾರ ಯತ್ನಿಸಿದ್ದಾರೆ ಎಂಬ ಎನ್‌ಬಿಸಿಸಿಯ ಆಕ್ಷೇಪವನ್ನು ತಿರಸ್ಕರಿಸಿತು.

Kannada Bar & Bench
kannada.barandbench.com