ಬಂಗಲೆ ತೆರವು: ಸುಪ್ರೀಂ ತೀರ್ಪಿನೊಂದಿಗೆ ಘರ್ಷಣೆ ತಪ್ಪಿಸಲು ಮಹುವಾ ಅರ್ಜಿ ಮುಂದೂಡಿದ ದೆಹಲಿ ಹೈಕೋರ್ಟ್

ತಮ್ಮನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಸುಪ್ರೀಂ ಕೋರ್ಟ್‌ನಲ್ಲಿ ಮೊಯಿತ್ರಾ ಪ್ರಶ್ನಿಸಿದ್ದು ಈ ಹಿನ್ನೆಲೆಯಲ್ಲಿ ತಾನು ನೀಡುವ ಯಾವುದೇ ಆದೇಶ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗಬಹುದೆಂದು ಅಭಿಪ್ರಾಯಪಟ್ಟ ಪೀಠ.
ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್
ಮಹುವಾ ಮೊಯಿತ್ರಾ, ದೆಹಲಿ ಹೈಕೋರ್ಟ್

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕಿ ಮಹುವಾ ಮೊಯಿತ್ರಾ ಅವರನ್ನು ಇತ್ತೀಚೆಗೆ ಲೋಕಸಭೆಯಿಂದ ಉಚ್ಚಾಟಿಸಿದ ಬೆನ್ನಿಗೇ ತಮಗೆ ಮಂಜೂರಾಗಿದ್ದ ಸರ್ಕಾರಿ ಬಂಗಲೆಯಿಂದ ತಮ್ಮನ್ನು ಹೊರಹಾಕುವ ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಯಾವುದೇ ಆದೇಶ ನೀಡಲು ದೆಹಲಿ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ಜನವರಿ 7, 2024 ರೊಳಗೆ ಮನೆ ತೆರವುಗೊಳಿಸುವಂತೆ ಮೊಯಿತ್ರಾ ಅವರಿಗೆ ಸರ್ಕಾರ ಸೂಚಿಸಿತ್ತು.

ತಮ್ಮನ್ನು ಸಂಸತ್‌ ಸ್ಥಾನದಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಮೊಯಿತ್ರಾ ಈ ಮೊದಲೇ ಬೇರೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ತಾನು ನೀಡುವ ಯಾವುದೇ ಆದೇಶ ಸರ್ವೋಚ್ಚ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗಬಹುದೆಂದು  ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ತಿಳಿಸಿದರು.

"ನೀವು ರಿಟ್ ಅರ್ಜಿ ಸಲ್ಲಿಸುವ ಮೂಲಕ ಆದೇಶ ಪ್ರಶ್ನಿಸಿದ್ದೀರಿ. ಅದರಲ್ಲಿ ಒಂದು ಪ್ರಾರ್ಥನೆ ಆದೇಶಕ್ಕೆ ತಡೆ ನೀಡುವುದೂ ಆಗಿರಬಹುದು. ನಿಮ್ಮ ಪರವಾಗಿ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನೇನಾದರೂ ನೀಡಿದರೆ, ನಿಮ್ಮ ಉಚ್ಚಾಟನೆ ರದ್ದಾಗಲಿದೆ. ನಾವು ಈ ಬಗ್ಗೆ ತೀರ್ಪು ನೀಡಿದರೆ, ಅದು ನೇರವಾಗಿ ಸುಪ್ರೀಂ ಕೋರ್ಟ್‌ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ನ್ಯಾ. ಪ್ರಸಾದ್ ವಿವರಿಸಿದರು.

ತಮ್ಮ ಉಚ್ಚಾಟನೆ ಪ್ರಶ್ನಿಸಿ ಮಹುವಾ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಜ. 3ರಂದು ವಿಚಾರಣೆ ನಡೆಸಲಿರುವುದರಿಂದ ಜ. 4ಕ್ಕೆ ಸರ್ಕಾರಿ ಬಂಗಲೆ ತೆರವು ಪ್ರಶ್ನಿಸಿ ಆಕೆ ಸಲ್ಲಿಸಿರುವ ಅರ್ಜಿಯನ್ನು ತಾನು ವಿಚಾರಣೆ ನಡೆಸುವುದಾಗಿ ದೆಹಲಿ ಹೈಕೋರ್ಟ್‌ ಹೇಳಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಲು ನಿರಾಕರಿಸಿತು.  

Kannada Bar & Bench
kannada.barandbench.com