ಮುಂಬರುವ ಶಬ್-ಎ-ಬರಾತ್ ಹಬ್ಬದಂದು ದೆಹಲಿಯ ನಿಜಾಮುದ್ದೀನ್ ಮರ್ಕಝ್‌ನಲ್ಲಿರುವ ಮಸೀದಿಯನ್ನು ಪೂರ್ಣ ತೆರೆಯಲು ಬುಧವಾರ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ [ದೆಹಲಿ ವಕ್ಫ್ ಮಂಡಳಿ ಅಧ್ಯಕ್ಷರು ಹಾಗೂ ದೆಹಲಿ ಸರ್ಕಾರ ನಡುವಣ ಪ್ರಕರಣ].
ಆ ದಿನ ಮಧ್ಯಾಹ್ನ 12 ಗಂಟೆಗೆ ಮಸೀದಿಯನ್ನು ತೆರೆದು ಠಾಣಾಧಿಕಾರಿ ಅನುಮತಿಯಂತೆ ಮರುದಿನ ಸಂಜೆ 4 ಗಂಟೆಗೆ ಮುಚ್ಚತಕ್ಕದ್ದು ಎಂದು ನ್ಯಾ. ಮನೋಜ್ ಕುಮಾರ್ ಓಹ್ರಿ ನೇತೃತ್ವದ ಪೀಠ ಹೇಳಿದೆ. ರಾಜ್ಯ ಆರೋಗ್ಯಾಧಿಕಾರಿ (ಎಸ್‌ಎಚ್‌ಒ) ವಿಧಿಸಿದ್ದ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನು ನ್ಯಾಯಾಲಯ ಇದೇ ವೇಳೆ ಮಾರ್ಪಡಿಸಿತು.
ಮೂರು ಮಹಡಿಗಳಿರುವ ಮಸೀದಿ ಆವರಣವನ್ನು ನಮಾಜ್ ಮತ್ತು ಪ್ರಾರ್ಥನೆಗಾಗಿ ತೆರೆಯಬೇಕು ಎಂದಿರುವ ಪೀಠ, ಇಂತಿಷ್ಟೇ ಜನರು ಮಸೀದಿ ಪ್ರವೇಶಿಸಬೇಕು ಎಂಬ ನಿಯಮವನ್ನು ಕೂಡ ತೆಗೆದುಹಾಕಿದೆ. ಹೊಸದಾಗಿ ಸಿಸಿಟಿವಿ ಅಳವಡಿಸುವ ಅಗತ್ಯವಿಲ್ಲ. ಬೇಡಿಕೆ ಇದ್ದರೆ ಮಾತ್ರ ಅಳವಡಿಸಿರುವ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರಿಗೆ ನೀಡಬೇಕು. ಮಸೀದಿಯ ಹೊರಗೆ ನಿರ್ಬಂಧಗಳನ್ನು ಮುಂದುವರೆಸಿ ಅಲ್ಲಿಗೆ ಭೇಟಿ ನೀಡುವ ಅನುಯಾಯಿಗಳನ್ನು ಉಷ್ಣತಾಮಾಪಕದ ಮೂಲಕ ಪರೀಕ್ಷಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ತಬ್ಲಿಘಿ ಜಮಾತ್ ಸದಸ್ಯರ ಗುಂಪು ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ಮರ್ಕಜ್ ಕಟ್ಟಡದಲ್ಲಿ ತಂಗಿದ್ದರು ಎಂದು ಆರೋಪಿಸಿ ಮಾರ್ಚ್ 2020ರಲ್ಲಿ ನಿಜಾಮುದ್ದೀನ್ ಮಸೀದಿಯನ್ನು ಸಾರ್ವಜನಿಕರಿಗೆ ನಿರ್ಬಂಧಿಸಲಾಗಿತ್ತು.