ಕಿರಿಯ ವಕೀಲರಿಗೆ ಉತ್ತಮ ಸ್ಟೈಪೆಂಡ್ ನೀಡುವಂತೆ ಹಿರಿಯ ನ್ಯಾಯವಾದಿಗಳಿಗೆ ದೆಹಲಿ ಹೈಕೋರ್ಟ್ ಮನವಿ

ಕಿರಿಯ ನ್ಯಾಯವಾದಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಬಾರ್ ಕೌನ್ಸಿಲ್ ಮತ್ತು ಬಾರ್ ಅಸೋಸಿಯೇಷನ್‌ಗಳಿಗೆ ನ್ಯಾಯಾಲಯ ತಿಳಿಸಿದೆ.
Lawyers
Lawyers

ತಮ್ಮ ಕೈಕೆಳಗೆ ಕೆಲಸ ಕಲಿಯಲು ಮುಂದಾಗುವ ಕಿರಿಯ ವಕೀಲರಿಗೆ ಗೌರವಯುತವಾದ ಜೀವನ ನಡೆಸಲು ಅನುಕೂಲವಾಗುವಂತೆ ಅವರಿಗೆ ಉತ್ತಮ ತರಬೇತಿ ಭತ್ಯೆ (ಸ್ಟೈಪೆಂಡ್‌) ನೀಡಲು  ಹಿರಿಯ ವಕೀಲರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಮನವಿ ಮಾಡಿದೆ.

ಹಿರಿಯ ವಕೀಲರು ತಮ್ಮ ಕೈಕೆಳಗೆ ಕಾರ್ಯ ನಿರ್ವಹಿಸುವ ಕಿರಿಯ ವಕೀಲರ ಆರ್ಥಿಕ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಸಹಾನುಭೂತಿಯ ವಿಧಾನ ಅಳವಡಿಸಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

Also Read
ಕಿರಿಯ ವಕೀಲರಿಗೆ ₹ 5,000 ಮಾಸಿಕ ಸ್ಟೈಪೆಂಡ್: ಮಹಾರಾಷ್ಟ್ರ, ಗೋವಾ ವಕೀಲರ ಪರಿಷತ್ತಿಗೆ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿ

ಕಿರಿಯ ನ್ಯಾಯವಾದಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಹೆಚ್ಚು ಸಂವೇದನಾಶೀಲವಾಗಿರಬೇಕು ಎಂದು ಬಾರ್ ಕೌನ್ಸಿಲ್‌ಗಳು ಮತ್ತು ಬಾರ್ ಅಸೋಸಿಯೇಷನ್‌ಗಳಿಗೆ ನ್ಯಾಯಾಲಯ ತಿಳಿಸಿದೆ. ಕಿರಿಯ ವಕೀಲರು ಎದುರಿಸುತ್ತಿರುವ ತೊಂದರೆಗಳ ಕುರಿತಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್) ವೇಳೆ ನ್ಯಾಯಾಲಯ ಈ ಸಲಹೆ ನೀಡಿತು.

ಸೂಕ್ತ ಮತ್ತು ಸ್ಥಿರ ಆದಾಯವಿಲ್ಲದೆ ದೆಹಲಿಯಂತಹ ನಗರಗಳಲ್ಲಿ ಊಟ, ವಸತಿ, ಪ್ರಯಾಣ ಮುಂತಾದವುಗಳಿಗೆ ಹಣ ಹೊಂದಿಸುವುದು ಹೊಸದಾಗಿ ನೊಂದಾಯಿಸಿಕೊಂಡ ವಕೀಲರಿಗೆ ತ್ರಾಸದಾಯಕವಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೊದಲ ಮೂರು ವರ್ಷಗಳು ಯುವ ವಕೀಲರಿಗೆ ಕನಿಷ್ಠ ರೂ. 5 ಸಾವಿರ ಸ್ಟೈಪೆಂಡ್ ನೀಡುವಂತೆ ಭಾರತೀಯ ವಕೀಲರ ಪರಿಷತ್ತು ಈ ಹಿಂದೆ ಅಧಿಸೂಚನೆ ಹೊರಡಿಸಿತ್ತು ಎನ್ನುವ ಅಂಶವನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ವಿಪರ್ಯಾಸವೆಂದರೆ ಅನೇಕ ಯುವ ವಕೀಲರಿಗೆ ಅವರ ಹಿರಿಯ ವಕೀಲರು ಯಾವುದೇ ವೇತನ, ತರಬೇತಿ ಭತ್ಯೆ ನೀಡುತ್ತಿಲ್ಲ. ಇದರಿಂದಾಗಿ ಈ ಯುವವಕೀಲರಿಗೆ ವೃತ್ತಿಯ ಬಗ್ಗೆ ಗಮನ ಕೇಂದ್ರೀಕರಿಸುವುದು ಕಷ್ಟವಾಗುತ್ತದೆ ಎಂದು ವಿವರಿಸಲಾಗಿದೆ.

ಕಾನೂನು ನೀತಿ ನಿರೂಪಣಾ ಸಂಸ್ಥೆಯಾದ ವಿಧಿ ಸೆಂಟರ್‌ ಫಾರ್‌ ಲೀಗಲ್‌ ಪಾಲಿಸಿಯ ಸಮೀಕ್ಷೆಯನ್ನು ಉಲ್ಲೇಖಿಸಿರುವ ಅರ್ಜಿದಾರರು, ಈ ಸಮೀಕ್ಷೆಯ ಅನ್ವಯ ಏಳು ಹೈಕೋರ್ಟ್‌ಗಳ ವ್ಯಾಪ್ತಿಯಲ್ಲಿ, ಎರಡು ವರ್ಷಕ್ಕೂ ಕಡಿಮೆ ಅನುಭವ ಇರುವ ಶೇ.79ರಷ್ಟು ವಕೀಲರು ರೂ.10 ಸಾವಿರಕ್ಕೂ ಕಡಿಮೆ ಮಾಸಿಕ ಸಂಭಾವನೆ ಪಡೆಯುತ್ತಿರುವುದು ತಿಳಿದು ಬಂದಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

Related Stories

No stories found.
Kannada Bar & Bench
kannada.barandbench.com