ಮುಂಬರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟದ (ಜೆಎನ್‌ಯುಎಸ್‌ಯು) ಚುನಾವಣೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ದೆಹಲಿ ಹೈಕೋರ್ಟ್ ಶುಕ್ರವಾರ ನೇಮಕ ಮಾಡಿದೆ.
ಜೆಎನ್‌ಯು ವಿದ್ಯಾರ್ಥಿನಿ ಸಾಕ್ಷಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಅವರ ನೇತೃತ್ವದ ಏಕಸದಸ್ಯ ಪೀಠವು ಚುನಾವಣಾ ಸಮಿತಿಯ ಚಟುವಟಿಕೆಗಳ ಮೇಲೆ ನ್ಯಾ. ರಾಮಸುಬ್ರಮಣಿಯನ್ ಅವರ ಸಮಿತಿಯು ನಿಗಾ ಇಡಲಿದೆ ಎಂದಿದೆ.
ಸಾಮಾನ್ಯ ಸಭೆಯಲ್ಲಿ ಸೂಕ್ತ ನಿಯಮ ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಮೇಲ್ನೋಟಕ್ಕೆ ಪೂರಕ ದಾಖಲೆಗಳಿವೆ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ, “ಚುನಾವಣಾ ಸಮಿತಿಯ ಕಾರ್ಯಚಟುವಟಿಕೆಗಳ ಮೇಲೆ ನಿಗಾವಹಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅವರನ್ನು ನೇಮಕ ಮಾಡಲು ಉಭಯ ಪಕ್ಷಕಾರರ ವಕೀಲರು ಒಪ್ಪಿದ್ದಾರೆ. ಹೀಗಾಗಿ, ನ್ಯಾ. ವಿ ರಾಮಸುಬ್ರಮಣಿಯನ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಜೆಎನ್‌ಯುಎಸ್‌ಯು ಚುನಾವಣೆ ನಡೆಯಲಿದ್ದು, ಮಾರ್ಚ್ 22ಕ್ಕೆ ಚುನಾವಣೆ ನಿಗದಿಯಾಗಿದೆ. ಮಾರ್ಚ್ 24ಕ್ಕೆ ಫಲಿತಾಂಶ ಪ್ರಕಟಿಸಲಾಗುತ್ತದೆ. 2019ರಲ್ಲಿ ಹಿಂದಿನ ಚುನಾವಣೆ ನಡೆದಿತ್ತು.