ತಿಹಾರ್ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕಾನೂನು ತಂಡದೊಂದಿಗೆ ಹೆಚ್ಚುವರಿಯಾಗಿ ಎರಡು ಸಭೆಗಳನ್ನು ನಡೆಸಲು ದೆಹಲಿ ಹೈಕೋರ್ಟ್ ಅವಕಾಶ ನೀಡಿದೆ.
ವಿಶೇಷ ಸಂದರ್ಭಗಳು ವಿಶೇಷ ಪರಿಹಾರ ಬೇಡುತ್ತವೆ ಎಂದ ನ್ಯಾ. ನೀನಾ ಬನ್ಸಾಲ್ ಕೃಷ್ಣ ಈ ಆದೇಶ ನೀಡಿದರು.
"ವಿಶೇಷ ಸನ್ನಿವೇಶಗಳು ವಿಶೇಷ ಪರಿಹಾರಗಳನ್ನು ಬೇಡುತ್ತವೆ. ಮೇಲಿನ ಚರ್ಚೆಯ ದೃಷ್ಟಿಯಿಂದ, ನ್ಯಾಯಯುತ ವಿಚಾರಣೆ ಮತ್ತು ಪರಿಣಾಮಕಾರಿ ಕಾನೂನು ಪ್ರಾತಿನಿಧ್ಯದ ಮೂಲಭೂತ ಹಕ್ಕನ್ನು ಗುರುತಿಸಿ, ಅರ್ಜಿದಾರರು ಜೈಲಿನಲ್ಲಿ ಇರುವವರೆಗೂ ಅವರಿಗೆ ಒಂದು ವಾರದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಕೀಲರೊಂದಿಗೆ ಎರಡು ಹೆಚ್ಚುವರಿ ಕಾನೂನು ಸಭೆ ನಡೆಸಲು ಅನುಮತಿಸಲಾಗಿದೆ, ”ಎಂದು ನ್ಯಾಯಾಲಯ ಹೇಳಿದೆ.
ದೆಹಲಿಯ ಅಬಕಾರಿ ನೀತಿಯಲ್ಲಿನ ಅಕ್ರಮ ಕುರಿತಂತೆ ಕೇಜ್ರಿವಾಲ್ ಅವರು ಪ್ರಸ್ತುತ ಸೆರೆವಾಸ ಅನುಭವಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಅವರ ವಿರುದ್ಧದ ಆರೋಪಗಳ ಕುರಿತು ತನಿಖೆ ನಡೆಸುತ್ತಿವೆ.
ಇ ಡಿ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ, ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಜೈಲುವಾಸ ಮುಂದುವರೆದಿದೆ.
ಜೈಲಿನಲ್ಲಿ ತಮ್ಮ ಕಾನೂನು ತಂಡದೊಂದಿಗೆ ಹೆಚ್ಚುವರಿ ಸಭೆಗಳನ್ನು ನಡೆಸಲು ಕೋರಿ ಅವರು ಈಚೆಗೆ ಮನವಿ ಸಲ್ಲಿಸಿದ್ದರು.
ಆದರೆ ವಕೀಲರೊಂದಿಗೆ ಎರಡು ಸಭೆ ನಡೆಸಲಷ್ಟೇ ಅವಕಾಶ ಇರುವಾಗ ಕೇಜ್ರಿವಾಲ್ ಅವರಿಗೆ ವಿನಾಯಿತಿ ಮತ್ತಷ್ಟು ಅವಕಾಶ ನೀಡಬಾರದು ಎಂದು ಇ ಡಿ ಮತ್ತು ತಿಹಾರ್ ಜೈಲು ಅಧಿಕಾರಿಗಳು ವಾದಿಸಿದ್ದರು.
ತಮ್ಮ ವಿರುದ್ಧ ದೇಶಾದ್ಯಂತ 30ಕ್ಕೂ ಹೆಚ್ಚು ಪ್ರಕರಣಗಳಿದ್ದು ಕಾರ್ಯತಂತ್ರ ರೂಪಿಸಲು ತಮಗೆ ಕಾನೂನು ತಂಡದೊಂದಿಗೆ ಹೆಚ್ಚುವರಿ ಸಭೆಗಳನ್ನು ನಡೆಸುವ ಅಗತ್ಯವಿದೆ ಎಂದು ಕೇಜ್ರಿವಾಲ್ ವಾದಿಸಿದ್ದರು.
ಆದರೆ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಮನವಿ ತಿರಸ್ಕರಿಸಿದ್ದರು. ಆ ನಂತರ ಕೇಜ್ರಿವಾಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇಂದು ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.