
ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಸಂದೇಶ ಪ್ರದರ್ಶಿಸುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ವಕೀಲರೊಬ್ಬರನ್ನು ದೆಹಲಿ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದ್ದು ಎರಡು ದಿನಗಳಲ್ಲಿ ವಿಷಾದ ಸೂಚಿಸಿ ಅಫಿಡವಿಟ್ ಸಲ್ಲಿಸುವಂತೆ ತಾಕೀತು ಮಾಡಿದೆ [ದಿವ್ಯಂ ಅಗರ್ವಾಲ್ ವಿ. ಯೂನಿಯನ್ ಆಫ್ ಇಂಡಿಯಾ & ಎಎನ್ಆರ್].
ಎರಡು ದಿನಗಳಲ್ಲಿ, ಕ್ಷಮೆಯಾಚಿಸಿರುವ ಪ್ರಮಾಣಪತ್ರ ಸಲ್ಲಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ ವಕೀಲನಿಗೆ ಸೂಚಿಸಿತು.
"ನಡೆದಿರುವುದಕ್ಕೆ ಅವರು ವಿಷಾದ ಸೂಚಕ ಅಫಿಡವಿಟ್ ಸಲ್ಲಿಸಬೇಕು ತದನಂತರ ನಾವು ಈ ಅವಲೋಕನಗಳನ್ನು ತೆಗೆದುಹಾಕುತ್ತೇವೆ. ಈ ವಿಷಯದಲ್ಲಿ ಸಂಪೂರ್ಣವಾಗಿ ವಿಷಾದ ವ್ಯಕ್ತಪಡಿಸುವ ಅಗತ್ಯವಿದೆಯೇ ವಿನಾ ಅದಕ್ಕಿಂತ ಕಡಿಮೆಯದ್ದೇನನ್ನೂ ಮಾಡುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಈ ಹಿಂದೆ ತಮ್ಮ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಅಭಿಪ್ರಾಯ ಪ್ರಶ್ನಿಸಿ ವಕೀಲ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಾನು ಏಕಸದಸ್ಯ ಪೀಠದ ಅಭಿಪ್ರಾಯವನ್ನು ಸಂಪೂರ್ಣ ಒಪ್ಪುತ್ತೇನೆ ಹಾಗೂ ಅರ್ಜಿ ಸಂಪೂರ್ಣ ತಪ್ಪು ಗ್ರಹಿಕೆಗಳಿಂದ ಕೂಡಿದೆ ಎಂದು ವಿಭಾಗೀಯ ಪೀಠ ನುಡಿದಿದೆ.
"ಈ ಮನುಷ್ಯ ತಿದ್ದಿಕೊಳ್ಳುವ ಅಗತ್ಯವಿದೆ. ಏಕ ಸದಸ್ಯ ಪೀಠ ಹೇಳಿರುವುದು ಸಂಪೂರ್ಣ ಸರಿಯಾಗಿದೆ. ಈ ಅರ್ಜಿಯನ್ನು ಸಲ್ಲಿಸಲೇಬಾರದಿತ್ತು" ಎಂದು ನ್ಯಾ. ಮನಮೋಹನ್ ಅಭಿಪ್ರಾಯಪಟ್ಟರು.
ವಕೀಲರ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠ, ತಂಬಾಕಿನ ವಿರುದ್ಧ ಸರ್ಕಾರ ಮೂಡಿಸುವ ಜಾಗೃತಿ ತಡೆಯುವುದಕ್ಕಾಗಿ ಅರ್ಜಿಯು ತಂಬಾಕು ಉದ್ಯಮದ ಲಾಬಿಯಿಂದ ಬೆಂಬಲಿತವಾಗಿದೆ ಎಂದಿತ್ತು.
ಭವಿಷ್ಯದಲ್ಲಿ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ವಕೀಲರಿಗೆ ಎಚ್ಚರಿಕೆ ನೀಡಿದ್ದ ನ್ಯಾ. ಸುಬ್ರಮೋಣಿಯಂ ಪ್ರಸಾದ್ , ಅರ್ಜಿ ದಂಡದೊಂದಿಗೆ ವಜಾಗೊಳಿಸಲು ಅರ್ಹವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರೂ "ಉಜ್ವಲ ಭವಿಷ್ಯ ಇರುವ ಯುವ ವಕೀಲರಾದ ಅರ್ಜಿದಾರರ ಭವಿಷ್ಯದ ಮೇಲೆ ಪರಿಣಾಮ ಬೀರಬಹುದಾದ ಯಾವುದೇ ಟೀಕೆ ಮಾಡಲು ಹೋಗುವುದಿಲ್ಲ" ಎಂದು ಹೇಳಿದ್ದರು.
ಇಂದಿನ ವಿಚಾರಣೆ ವೇಳೆ ತಂಬಾಕು ಉದ್ಯಮಕ್ಕೆ ಸಹಾಯ ಮಾಡಲು ಅರ್ಜಿ ಸಲ್ಲಿಸಲಾಗಿದೆ ಎಂದು ವಿಭಾಗೀಯ ಪೀಠ ಟೀಕಿಸಿದಾಗ ವಕೀಲರು ಅದು ನಿಜವಲ್ಲ ಎಂದು ಸಮರ್ಥಿಸಿಕೊಂಡರು. ಆಗ ನ್ಯಾಯಾಲಯ "ಪ್ರತಿಯೊಬ್ಬರಿಗೂ ಸ್ವಲ್ಪ ಬುದ್ಧಿಮತ್ತೆ ಇರುತ್ತದೆ. ಮತ್ತೊಬ್ಬರಿಗೆ ಏನೂ ಅರ್ಥವಾಗುವುದಿಲ್ಲ ಎಂಬ ತಪ್ಪು ಕಲ್ಪನೆಯಲ್ಲಿರಬಾರದು" ಎಂದು ಬುದ್ಧಿಮಾತು ಹೇಳಿತು.
ಮೇಲ್ಮನವಿದಾರನನ್ನುದ್ದೇಶಿಸಿ ನೇರವಾಗಿ ಮಾತನಾಡಿದ ನ್ಯಾಯಾಲಯ, "ದಯವಿಟ್ಟು ತಿದ್ದಿಕೊಳ್ಳಿ. ಇಷ್ಟು ಬೇಗ ಈ ರೀತಿ ಮುಂದುವರೆಯುವುದು ತರವಲ್ಲ" ಎಂದು ಎಚ್ಚರಿಕೆ ನೀಡಿತು.
ಕ್ಯಾನ್ಸರ್ ಹರಡುತ್ತಿದೆ ಮತ್ತು ಕ್ಯಾನ್ಸರ್ ಹೇಗೆ ಹರಡುತ್ತಿದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸದಿದ್ದರೆ, ಯುವ ಪೀಳಿಗೆ ಅದರ ಬಗ್ಗೆ ತಿಳಿವಳಿಕೆ ಹೊಂದುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
"ಜಾಹೀರಾತಿನಲ್ಲಿ ಅವರು ತೋರಿಸುತ್ತಿರುವುದು ನೈಜ ವಾಸ್ತವ" ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದರು.
ಅರ್ಜಿ ಸಲ್ಲಿಸಿದ್ದಕ್ಕಾಗಿ ವಿಷಾದದ ಅಫಿಡವಿಟ್ ಸಲ್ಲಿಸುವುದಾಗಿ ಮೇಲ್ಮನವಿದಾರನನ್ನು ಪ್ರತಿನಿಧಿಸಿದ ವಕೀಲರು ಹೇಳಿದರು. ಈ ಹಿನ್ನೆಲೆಯಲ್ಲಿ ಪೀಠ ಪ್ರಕರಣದ ವಿಚಾರಣೆಯನ್ನು ಪೀಠ ಡಿ. 7ಕ್ಕೆ ನಿಗದಿಪಡಿಸಿತು.