
ಪತ್ರಕರ್ತ, ಆಲ್ಟ್ ನ್ಯೂಸ್ ಜಾಲತಾಣದ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು 2018 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 2022ರಲ್ಲಿ ಜುಬೈರ್ ಅವರ ನಿವಾಸದಿಂದ ವಶಪಡಿಸಿಕೊಂಡಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ಮರಳಿಸುವಂತೆ ಕೋರಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಸೋಮವಾರ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವ ಹಾಗೂ ಲ್ಯಾಪ್‌ಟಾಪ್ ತಪಾಸಣೆ ನಡೆಸಲು ಮತ್ತು ಅದನ್ನು ವಶಕ್ಕೆ ಪಡೆಯಲು ಪಟಿಯಾಲ ಹೌಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಜುಬೈರ್ ಜುಲೈ 2022ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನಂತರ ವಿಚಾರಣಾ ನ್ಯಾಯಾಲಯ ಅವರಿಗೆ ಜಾಮೀನು ನೀಡಿತ್ತು.
ಜುಬೈರ್ 1983ರಲ್ಲಿ ಬಿಡುಗಡೆಯಾಗಿದ್ದ ಹಿಂದಿ ಸಿನಿಮಾ ದೃಶ್ಯವೊಂದನ್ನು ಟ್ವೀಟ್ ಮಾಡಿದ್ದರು. ಇದು ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಸಂದೇಶ ನೀಡುತ್ತದೆ ಎಂದು ದೆಹಲಿ ಪೊಲೀಸರು ದೂರಿದ್ದರು.
ಇಂದು ಜುಬೈರ್ ಅವರ ಮನವಿ ವಿಲೇವಾರಿ ಮಾಡಿದ ನ್ಯಾ. ಸ್ವರಣಾ ಕಾಂತ ಶರ್ಮಾ ಅವರು ಎಲೆಕ್ಟ್ರಾನಿಕ್ ಸಾಧನಗಳನ್ನು ಬಿಡುಗಡೆ ಮಾಡುವುದಕ್ಕಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಸೂಕ್ತ ಅರ್ಜಿ ಸಲ್ಲಿಸಲು ಜುಬೈರ್ ಸ್ವತಂತ್ರರು ಎಂದರು.
ಯಾವ ಸಾಧನ ಮತ್ತು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬುದನ್ನು ಅರ್ಜಿದಾರ ಜುಬೈರ್ ನಿರ್ದಿಷ್ಟವಾಗಿ ತಿಳಿಸಿಲ್ಲ. ಅರ್ಜಿದಾರರ ಪರ ವಕೀಲರು ಮೊಬೈಲ್‌ಫೋನ್ ಕುರಿತು ಪ್ರಸ್ತಾಪಿಸಿದ್ದು ವಾದದ ವೇಳೆ ತಿಳಿದುಬಂದಿದೆ. ಈ ಕುರಿತಂತೆ ಅವರು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ವಿವರಿಸಿತು.
ಈ ಮೊದಲು ಟ್ವೀಟ್ ಪೋಸ್ಟ್ ಮಾಡಲು ಬಳಸಿದ್ದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ತನ್ನ ಬೆಂಗಳೂರಿನ ನಿವಾಸದಲ್ಲಿದೆ ಎಂದು ಜುಬೇರ್ ತಮಗೆ ಮಾಹಿತಿ ನೀಡಿದ್ದರು ಎನ್ನುವ ಪೊಲೀಸರ ಹೇಳಿಕೆಯನ್ನು ಜುಬೈರ್ ಅಲ್ಲಗಳೆದಿದ್ದರು. ಜುಬೈರ್ ತಾನು 2018ರ ಆ ದಿನಾಂಕದಂದು ಅಂತಹ ಟ್ವೀಟ್ ಮಾಡಿರಲಿಲ್ಲ. ಅಲ್ಲದೆ ತಾನು ಆಗ ಬಳಸುತ್ತಿದ್ದ ಮೊಬೈಲ್ ಫೋನ್ ಕಳೆದು ಹೋಗಿದ್ದು, ಈ ಬಗೆಗೆ ಕಳೆದು ಹೋಗಿರುವ ವಸ್ತುವಿನ ಕುರಿತಾದ ಸ್ಥಳೀಯ ಪೊಲೀಸರ ವರದಿಯನ್ನೂ ತಾನು ಸಲ್ಲಿಸಿರುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಪೊಲೀಸರು ಆಕ್ಷೇಪಿಸಿರುವ ಟ್ವೀಟ್ ಆಂಡ್ರಾಯ್ಡ್ ಫೋನ್‌ನಿಂದ ಮಾಡಲಾಗಿದ್ದು ಅದಕ್ಕೂ ಲ್ಯಾಪ್‌ಟಾಪ್‌ಗೂ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.