

ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ತೆಲುಗು ನಟ ಜೂನಿಯರ್ ಎನ್‌ಟಿಆರ್ ಅವರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ನಂದಮೂರಿ ತಾರಕ ರಾಮರಾವ್ ಮತ್ತು ಅಶೋಕ್ ಕುಮಾರ್ ಅಥವಾ ಅನಾಮಧೇಯ ವ್ಯಕ್ತಿಗಳ (ಜಾನ್ ಡೋ) ನಡುವಣ ಪ್ರಕರಣ].
ಸೋಮವಾರ ಪ್ರಕರಣ ನ್ಯಾಯಮೂರ್ತಿ ಮನ್‌ಮೀತ್ ಪ್ರೀತಂ ಸಿಂಗ್ ಅರೋರಾ ಅವರಿದ್ದ ಪೀಠದೆದುರು ವಿಚಾರಣೆಗೆ ಬಂದಾಗ, ನಟನ ಪರ ಹಾಜರಾದ ಹಿರಿಯ ವಕೀಲ ಜೆ ಸಾಯಿ ದೀಪಕ್ ಇ–ವಾಣಿಜ್ಯ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ನಟನ ವ್ಯಕ್ತಿತ್ವ ಹಕ್ಕನ್ನು ಉಲ್ಲಂಘಿಸುವಂತಹ ಹಲವು ಆಕ್ಷೇಪಾರ್ಹ ವಸ್ತು ವಿಷಯಗಳು ಇವೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆಗ ನ್ಯಾಯಾಲಯ ಜೂ. ಎನ್‌ಟಿಆರ್ ಸಲ್ಲಿಸಿರುಯವ ಮನವಿಯನ್ನು ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಗಾರರ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ 2021ರಡಿ ನೀಡಿದ ದೂರು ಎಂದು ಪರಿಗಣಿಸಿತು. ಎಲ್ಲಾ ಇ–ವಾಣಿಜ್ಯ ವೇದಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮೂರು ದಿನಗಳೊಳಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿತು.
ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 22ಕ್ಕೆ ನಿಗದಿಯಾಗಿದ್ದು ಅಂದು ಪ್ರಕರಣ ಕುರಿತು ಸಮಗ್ರ ಆದೇಶ ನೀಡುವುದಾಗಿ ತಿಳಿಸಿತು. ವಕೀಲ ಶಿವ್ ವರ್ಮಾ ಮೂಲಕ ಜೂನಿಯರ್ ಎನ್‌ಟಿಆರ್ ಅವರ ವ್ಯಕ್ತಿತ್ವ ಹಕ್ಕು ಮೊಕದ್ದಮೆ ಹೂಡಲಾಗಿದೆ.
ಗಮನಾರ್ಹ ಅಂಶವೆಂದರೆ, ಬಾಲಿವುಡ್ ನಟ ಅಜಯ್ ದೇವಗನ್ ಅವರ ವ್ಯಕ್ತಿತ್ವ ಹಕ್ಕು ಕುರಿತ ಪ್ರಕರಣವನ್ನು ನವೆಂಬರ್ 27ರಂದು ವಿಚಾರಣೆ ನಡೆಸಿದ ವೇಳೆ ನ್ಯಾಯಾಲಯ ಪಕ್ಷಕಾರರು ಮೊದಲು 2021ರ ಐಟಿ ನಿಯಮಗಳ ಅಡಿಯಲ್ಲಿ ಲಭ್ಯವಿರುವ ಕಾನೂನು ಪರಿಹಾರಗಳನ್ನು ಬಳಸಬೇಕು. ಜೊತೆಗೆ ತಮ್ಮ ವಿರುದ್ಧದ ಮಾನಹಾನಿಕರ ಮತ್ತು ಆಕ್ಷೇಪಾರ್ಹ ವಸ್ತುವಿಷಯದ ಬಗ್ಗೆ ಮಧ್ಯಸ್ಥಗಾರರಾದ ಸಾಮಾಜಿಕ ಮಾಧ್ಯಮ ಕಂಪೆನಿಗಳಿಗೆ ಮೊದಲು ದೂರು ನೀಡಬೇಕು ಎಂದಿತ್ತು.