ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಅಪಘಾತಕ್ಕೀಡಾಗಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದ ಬಾಲಕಿಯೊಬ್ಬಳಿಗೆ ₹1.12 ಕೋಟಿಗೂ ಹೆಚ್ಚು ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ಜ್ಯೋತಿ ಸಿಂಗ್ ಮತ್ತು ನಂದ ಕಿಶೋರ್ ಇನ್ನಿತರರ ನಡುವಣ ಪ್ರಕರಣ].
ಪರಿಹಾರದ ರೂಪದಲ್ಲಿ ₹ 47.49 ಲಕ್ಷ ಮಂಜೂರು ಮಾಡಿದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಜ್ಮಿ ವಜೀರಿ ಅವರು ಈ ಆದೇಶ ನೀಡಿದ್ದಾರೆ.
“ಪರಿಹಾರದ ಮೊತ್ತವನ್ನು ರೂ.65,09,779/-ರಷ್ಟು ಹೆಚ್ಚಿಸಲಾಗಿದೆ. ಅರ್ಜಿದಾರೆ ಜ್ಯೋತಿ ಸಿಂಗ್ ಅವರಿಗೆ ಒಟ್ಟು ರೂ.1,12,59,389/- ಮೊತ್ತವನ್ನು 10.03.2008 ರಿಂದ ಅಂದರೆ ಎಂಸಿಎಟಿ ಎದುರು ಪರಿಹಾರಕ್ಕಾಗಿ ಅರ್ಜಿ ಕೋರಿದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ 7.5% ಬಡ್ಡಿ ದರದೊಂದಿಗೆ ನೀಡಬೇಕಿದೆ” ಎಂದು ನ್ಯಾಯಾಲಯ ಹೇಳಿದೆ.
ತನ್ನ ಕಕ್ಷಿದಾರೆಯಾದ ಶಾಲಾ ಬಾಲಕಿ ಜೀವನ ಪರ್ಯಂತ ಗಾಲಿಕುರ್ಚಿಯಲ್ಲಿಯೇ ಇರಬೇಕಿದೆ. ಬೆನ್ನುಮೂಳೆ ಹಾಗೂ ಮೊಣಕಾಲುಗಳು ಶೇ 100ರಷ್ಟು ಅಂಗವೈಕಲ್ಯಕ್ಕೆ ತುತ್ತಾಗಿರುವುದರಿಂದ ಆಕೆ ಶೌಚಾಲಯಕ್ಕೆ ತೆರಳುವಂತಹ ಸಣ್ಣ ಅಗತ್ಯಗಳನ್ನು ಕೂಡ ಬೇರೊಬ್ಬರ ಸಹಾಯ ಇಲ್ಲದೆ ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಕೀಲ ಸೌರಭ್ ಕನ್ಸಾಲ್ ವಾದಿಸಿದರು. ಎಂಸಿಎಟಿ ಪ್ರಕರಣವನ್ನು ಸರಿಯಾಗಿ ಪರಿಗಣಿಸಿಲ್ಲ ಎಂಬುದು ಅವರ ವಾದವಾಗಿತ್ತು.
ವೈದ್ಯಕೀಯ ವರದಿ ಸೇರಿದಂತೆ ಸಾಕ್ಷ್ಯಗಳನ್ನು ಪರಿಗಣಿಸಿದ ನ್ಯಾಯಾಲಯ ಬಾಲಕಿ ಪರ ವಕೀಲರ ವಾದಗಳನ್ನು ಮನ್ನಿಸಿ ಒಟ್ಟು ₹1,12,59,389 ಪರಿಹಾರ ನೀಡುವಂತೆ ಹೆಚ್ಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.
[ಆದೇಶ ಪ್ರತಿಯನ್ನು ಇಲ್ಲಿಓದಿ]