ವಕೀಲೆಯರಿಗೆ ಸಂಘದಲ್ಲಿ ಮೀಸಲಾತಿ ನೀಡುವ ನಿರ್ಣಯವನ್ನು ದೆಹಲಿ ಹೈಕೋರ್ಟ್ ವಕೀಲರ ಸಂಘ (ಡಿಎಚ್‌ಸಿಬಿಎ) ಸಾಮಾನ್ಯ ಮಂಡಳಿಯು ತನ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಿರಸ್ಕರಿಸದೆ.
ಮೀಸಲಾತಿ ಕುರಿತಂತೆ ನಿರ್ಧರಿಸಲು ಮತದಾನ ಮಾಡುವ ಸಲುವಾಗಿ ಸಂಘದ ಅಧ್ಯಕ್ಷ ಮತ್ತು ಹಿರಿಯ ವಕೀಲ ಮೋಹಿತ್ ಮಾಥುರ್ ಮತ್ತು ಕಾರ್ಯದರ್ಶಿ ಸಂದೀಪ್ ಶರ್ಮಾ ನೇತೃತ್ವದಲ್ಲಿ ಸೋಮವಾರ ಸಂಘದ ಸಭೆ ನಡೆದಿತ್ತು.
ನಿರ್ಣಯವನ್ನು ಧ್ವನಿ ಮತಕ್ಕೆ ಹಾಕಿದಾಗ ಹೆಚ್ಚಿನ ಸಂಖ್ಯೆಯಲ್ಲಿದ್ದ ಪುರುಷ ಸದಸ್ಯರು ಮೀಸಲಾತಿ ವಿರುದ್ಧ ನಿರ್ಣಯ ಕೈಗೊಂಡರು. ಇದರಿಂದ ವಕೀಲೆಯರ ಪರ ಮತಗಳು ಕಡಿಮೆಯಾದವು.
ಸಂಘದ ನಿರ್ಧಾರವನ್ನು ತಿಳಿಸಿದ ಶರ್ಮಾ ಅವರು ಸಂಘದ ಯಾವುದೇ ಸ್ಥಾನಕ್ಕೆ ಯಾವುದೇ ಬಗೆಯ ಮೀಸಲಾತಿಯನ್ನು ವಿರೋಧಿಸುವುದಾಗಿ ತಿಳಿಸಿದರು.
ಖಜಾಂಚಿ ಹುದ್ದೆ ಸೇರಿದಂತೆ 10 ಹುದ್ದೆಗಳಲ್ಲಿ ಕನಿಷ್ಠ 4 ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಸಂಘಕ್ಕೆ ನಿರ್ದೇಶಿಸಿದ್ದರಿಂದ ಸಂಘ ಇದೀಗ ಕೈಗೊಂಡಿರುವ ನಿರ್ಣಯ ಗಮನ ಸೆಳೆದಿದೆ.
ಅಕ್ಟೋಬರ್ 16 ರಂದು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಮತ್ತೆ ನಡೆಸಲಿದೆ.
ಸುಪ್ರೀಂ ಕೋರ್ಟ್ ಎರಡು ಅರ್ಜಿಗಳ ವಿಚಾರಣೆ ನಡೆಸಲಿದ್ದು ಒಂದು ದೇಶದ ಎಲ್ಲಾ ವಕೀಲರ ಸಂಘಗಳಲ್ಲಿ ಶೇ 33ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ಕೋರಿದ್ದ ಅರ್ಜಿ, ಮತ್ತೊಂದು ದೆಹಲಿ ಹೈಕೋರ್ಟ್ ವಕೀಲರ ಸಂಘದಲ್ಲಿ ಕೋರಲಾದ ಮಹಿಳಾ ಮೀಸಲಾತಿ.
ದೆಹಲಿ ವಕೀಲರ ಪರಿಷತ್ ಮತ್ತು ದೆಹಲಿಯ ಎಲ್ಲಾ ವಕೀಲರ ಸಂಘಗಳಿಗೆ ಅಕ್ಟೋಬರ್ 19ರಂದು ಚುನಾವಣೆ ನಡೆಯಲಿದೆ.