
ಕಳೆದ ಜುಲೈನಲ್ಲಿ ದೆಹಲಿಯ ರಾಜೇಂದ್ರ ನಗರದಲ್ಲಿರುವ ರಾವ್ಸ್ ಕೋಚಿಂಗ್ ಕೇಂದ್ರದಲ್ಲಿ ಮಳೆ ನೀರು ನುಗ್ಗಿ ಮೂವರು ಯುಪಿಎಸ್‌ಸಿ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣದ ತನಿಖೆಯ ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಯನ್ನು ನೇಮಿಸುವಂತೆ ಸಿಬಿಐಗೆ ದೆಹಲಿ ಹೈಕೋರ್ಟ್ ಸೂಚಿಸಿದೆ [ಡಾಲ್ವಿನ್ ಸುರೇಶ್ ಮತ್ತು ಸಿಬಿಐ ನಡುವಣ ಪ್ರಕರಣ].
ಘಟನೆಯಲ್ಲಿ ಸಾವನ್ನಪ್ಪಿದ ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರ ತಂದೆ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಸಿಬಿಐ ನಿರ್ದೇಶಕರಿಗೆ ಈ ಸೂಚನೆ ನೀಡಿದ್ದಾರೆ.
ಪ್ರಸ್ತುತ ಪ್ರಕರಣದ ದೂರುದಾರರಿಗೆ ನೈಜ ಕಾಳಜಿ ಇದೆ ಎಂಬ ಅಂಶ ತನಗೆ ತಿಳಿದಿದೆ ಎಂದ ನ್ಯಾಯಾಲಯ ಸಿಬಿಐ ನಡೆಸುತ್ತಿರುವ ತನಿಖೆಯ ನಿಯಮಿತ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನೇಮಿಸಲು ಕೇಂದ್ರೀಯ ತನಿಖಾ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿತು.
ವಿಚಾರಣೆಯ ಲೋಪದೋಷಗಳ ಕಾರಣಕ್ಕೆ ತನಿಖಾಧಿಕಾರಿಯನ್ನು ಬದಲಿಸುವಂತೆ ಈ ಹಿಂದೆ ಮೃತರ ತಂದೆ ಮಾಡಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಪ್ರಕರಣದಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದು ಮುಖ್ಯ ವಿಚಕ್ಷಣಾ ಆಯೋಗದ (ಸಿವಿಸಿ) ಮೇಲ್ವಿಚಾರಣೆಯಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿರುವುದನ್ನು ಗಮನಿಸಿದ್ದ ನ್ಯಾಯಾಲಯ ತಂದೆಯ ಮನವಿ ತಿರಸ್ಕರಿಸಿತ್ತು. ಈ ಆದೇಶವನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಮತ್ತೊಂದೆಡೆ ಕಳೆದ ಆಗಸ್ಟ್‌ನಲ್ಲಿ ಹೈಕೋರ್ಟ್ ನೀಡಿದ್ದ ಆದೇಶದಂತೆ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
ಅರ್ಜಿದಾರರು ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಮೂಲಭೂತ ಹಕ್ಕನ್ನು ಹೊಂದಿದ್ದರೂ, ಅವರು ನಡೆಸುತ್ತಿರುವ ತನಿಖೆಯ ಗೌಪ್ಯತೆ ಅರಿಯುವಂತಿಲ್ಲ. ತನಿಖೆಯನ್ನು ಯಾವ ರೀತಿಯಲ್ಲಿ ನಡೆಸಬೇಕು ಎಂಬುದು ತನಿಖೆ ನಡೆಸುವ ಸಂಸ್ಥೆಯ ವಿಶೇಷಾಧಿಕಾರವಾಗಿದೆ ಎಂದು ಅದು ಹೇಳಿದೆ.
ಈ ಹಂತದಲ್ಲಿ ಪ್ರಶ್ನೆಗಳನ್ನುಎತ್ತುವುದರಿಂದ ತನಿಖೆಗೆ ಅಡ್ಡಿಯಾಗಬಹುದು ಎಂಬ ಕಾರಣಕ್ಕೆ ಅರ್ಜಿದಾರರು ತನಿಖಾ ಸಂಸ್ಥೆಯ ಮೇಲೆ ನಂಬಿಕೆ ಇಡಬೇಕು ಎಂದ ಅದು ತನಿಖೆಯ ಮೇಲ್ವಿಚಾರಣೆಗೆ ಹಿರಿಯ ಅಧಿಕಾರಿಯನ್ನು ನೇಮಿಸುವಂತೆ ಅದು ಸಿಬಿಐಗೆ ಸೂಚಿಸಿತು.