ಲೋಕಸಭೆ ಉಪಸಭಾಧ್ಯಕ್ಷರ ಸ್ಥಾನ ಖಾಲಿಯಾಗಿ 830 ದಿನ ಕಳೆದರೂ ಆ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆಯದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುಧವಾರ ನಿರ್ದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠ ಈ ಸಂಬಂಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನಡೆಸಿತು.
ಅರ್ಜಿದಾರರಾಗಿ ಖುದ್ದು ಹಾಜರಾದ ವಕೀಲ ಪವನ್ ರಿಲೆ ಲೋಕಸಭಾ ಉಪಾಧ್ಯಕ್ಷರ ಹುದ್ದೆ ಅತ್ಯಂತ ದೀರ್ಘಕಾಲದಿಂದ ಖಾಲಿ ಇದೆ. ಉಪ ಸಭಾಧ್ಯಕ್ಷರ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸುವುದು ಸ್ಪೀಕರ್ ಅವರ ಪ್ರಾಥಮಿಕ ಕರ್ತವ್ಯವಾಗಿದೆ ಎಂದು ವಾದಿಸಿದರು.
ಲೋಕಸಭಾ ಪ್ರಕ್ರಿಯೆ ಮತ್ತು ವ್ಯವಹಾರ ನಿಯಮ 8ರೊಂದಿಗೆ ಸಂವಿಧಾನದ 93 ನೇ ವಿಧಿಯನ್ನು ಒಟ್ಟಿಗೆ ಇರಿಸಿ ನೋಡಿದಾಗ ಸ್ಪೀಕರ್ ನಿಗದಿಪಡಿಸಿದ ದಿನಾಂಕದ ನಂತರ ಮತ್ತು ಚುನಾವಣೆಗೆ ಪ್ರಧಾನ ಕಾರ್ಯದರ್ಶಿ ನೋಟಿಸ್ ನೀಡಿದ ನಂತರ, ಉಪಸಭಾಧ್ಯಕ್ಷರನ್ನು ಆಯ್ಕೆ ಮಾಡುವ ಕಡ್ಡಾಯ ಸಾಂವಿಧಾನಿಕ ಬಾಧ್ಯತೆ ಸದನದ ಮೇಲೆ ಇರುತ್ತದೆ. ಉಪಸಭಾಧ್ಯಕ್ಷರನ್ನು ನೇಮಕ ಮಾಡದಂತೆ ಯಾರಿಗೂ ವಿವೇಚನಾಧಿಕಾರ ನೀಡಿಲ್ಲ.
ಲೋಕಸಭೆಯ ಉಪಸಭಾಧ್ಯಕ್ಷ ಸ್ಥಾನ ಸ್ಪೀಕರ್ ಹುದ್ದೆಗೆ ಅಧೀನವಲ್ಲ, ಸ್ವತಂತ್ರವಾಗಿ, ಸದನಕ್ಕೆ ಮಾತ್ರ ಉತ್ತರದಾಯಿಯಾಗಿರುತ್ತದೆ. ಉಪಸಭಾಧ್ಯಕ್ಷರ ಸಾಂವಿಧಾನಿಕ ಹುದ್ದೆಯನ್ನು ಆಯ್ಕೆ ಮಾಡುವಲ್ಲಿ ಆಗುವ ಯಾವುದೇ ವಿಳಂಬವು ಸಾಂವಿಧಾನಿಕ ನಂಬಿಕೆಯ ತಳಹದಿ ಮೇಲೆ ಸ್ಥಾಪಿತವಾದ ಲೋಕಸಭೆಯಲ್ಲಿನ ಸಮಷ್ಟಿ ನಂಬಿಕೆಯನ್ನು ಉಲ್ಲಂಘಿಸುತ್ತದೆ.
ಭಾರತೀಯ ಗಣರಾಜ್ಯದ ಇತಿಹಾಸದಲ್ಲಿಇದೇ ಮೊದಲ ಬಾರಿಗೆ ಉಪಸಭಾಧ್ಯಕ್ಷ ಹುದ್ದೆ 2021ರ ಆಗಸ್ಟ್ 30ರ ವೇಳೆಗೆ 830 ದಿನಗಳಿಂದ (2 ವರ್ಷ, 3 ತಿಂಗಳು, 7 ದಿನಗಳು) ಖಾಲಿ ಇದೆ.
ಆದ್ದರಿಂದ, ಒಂದು ತಿಂಗಳೊಳಗೆ ಉಪ ಸಭಾಧ್ಯಕ್ಷರ ಚುನಾವಣೆ ನಡೆಸಲು ಲೋಕಸಭಾ ಸ್ಪೀಕರ್‌ಗೆ ನಿರ್ದೇಶನ ನೀಡಬೇಕು. ಚುನಾವಣೆ ನಡೆಸಲು ಸ್ಪೀಕರ್‌ಗೆ ಸಹಾಯ ಮಾಡುವಂತೆ ಕೇಂದ್ರಕ್ಕೆ ಸೂಚಿಸಬೇಕು.
ಸರ್ಕಾರದಿಂದ ಸೂಚನೆಗಳನ್ನು ಪಡೆಯುವುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ತಿಳಿಸಿದ್ದು ಉಪ ಸಭಾಧ್ಯಕ್ಷರನ್ನು ನೇಮಕ ಮಾಡಿಕೊಳ್ಳದಿರುವ ಕುರಿತು ಖಾತ್ರಿಪಡಿಸಿಕೊಳ್ಳುವುದಾಗಿ ತಿಳಿಸಿದರು.
ಸೆ. 30ರಂದು ಮುಂದಿನ ವಿಚಾರಣೆ ನಡೆಯಲಿದೆ.