ಗಲ್ಲುಶಿಕ್ಷೆಯಿಂದ ಮಗಳ ರಕ್ಷಣೆ: ಕೇರಳ ಮಹಿಳೆ ಮನವಿ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದ ದೆಹಲಿ ಹೈಕೋರ್ಟ್

ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿ ಹತ್ಯೆ ಪ್ರಕರಣದಲ್ಲಿ ಯೆಮೆನ್ ನಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಮಹಿಳೆ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ.
Delhi High Court
Delhi High Court

ವಿದೇಶದಲ್ಲಿರುವ ತನ್ನ ಮಗಳನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡುವುದಕ್ಕಾಗಿ ಮೃತನ ಕುಟುಂಬಕ್ಕೆ ಪರಿಹಾರ ಧನ ಒದಗಿಸುವುದಕ್ಕಾಗಿ ಯೆಮೆನ್‌ಗೆ ತೆರಳಲು ಅನುಮತಿ ನೀಡುವಂತೆ ಕೇರಳ ಮೂಲದ ಅಪರಾಧಿ ನಿಮಿಷಾ ಪ್ರಿಯಾ ಅವರ ತಾಯಿ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಪ್ರೇಮಕುಮಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಈ ಸಂಬಂಧ ಕೇಂದ್ರದಿಂದ ಸೂಚನೆಗಳನ್ನು ಪಡೆಯಲು ತಮಗೆ ಎರಡು ವಾರಗಳ ಕಾಲಾವಕಾಶ ನೀಡಬೇಕೆಂದು ಕೇಂದ್ರ ಸರ್ಕಾರದ ಪರ ವಕೀಲರು ಕೋರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್‌ ಅವರು ಪ್ರಕರಣವನ್ನು ನವೆಂಬರ್ 16ಕ್ಕೆ ಮುಂದೂಡಿದರು.

ಯೆಮೆನ್‌ಗೆ ತೆರಳಲು ಇರುವ ನಿಷೇಧದ ಹೊರತಾಗಿಯೂ ಅಲ್ಲಿಗೆ ಪ್ರಯಾಣಿಸಲು ನಿಮಿಷಾಳ ತಾಯಿ ಪ್ರೇಮಕುಮಾರಿ ಅವರು ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ. ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹದಿ ಹತ್ಯೆ ಪ್ರಕರಣದಲ್ಲಿ ಯೆಮೆನ್ ನಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಮಹಿಳೆ ನಿಮಿಷಾ ಪ್ರಿಯಾಗೆ ಮರಣದಂಡನೆ ವಿಧಿಸಲಾಗಿದೆ.

ಗಲ್ಲು ಶಿಕ್ಷೆಯಿಂದ ನಿಮಿಷಾ ಅವರ ತಾಯಿ ಪ್ರೇಮಕುಮಾರಿ ಅವರ ಮಗಳನ್ನು ಪಾರು ಮಾಡು ಏಕೈಕ ಮಾರ್ಗವೆಂದರೆ ಮೃತರ ಕುಟುಂಬಕ್ಕೆ ಪರಿಹಾರ ಧನ ಒದಗಿಸಿ ಅವರೊಂದಿಗೆ ಮಾತಕತೆ ನಡೆಸುವುದಾಗಿದೆ. ಆ ಉದ್ದೇಶಕ್ಕಾಗಿ ಪ್ರೇಮಕುಮಾರಿ ಯೆಮೆನ್‌ಗೆ ತೆರಳಬೇಕಿದೆ. ಪ್ರಯಾಣ ನಿಷೇಧ ಇರುವ ಕಾರಣ ಅರ್ಜಿದಾರರು ಯೆಮೆನ್‌ಗೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ  ಎಂದು ಪ್ರೇಮಕುಮಾರಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಪ್ರಕರಣದಲ್ಲಿ ರಾಜತಾಂತ್ರಿಕ ಮಧ್ಯಸ್ಥಿಕೆ ಕೋರಿ ಕಳೆದ ವರ್ಷ, ʼನಿಮಿಷಾ ಪ್ರಿಯಾ ಉಳಿಸಿ ಅಂತಾರಾಷ್ಟ್ರೀಯ ಕಾರ್ಯಚೂಚಿ ಮಂಡಳಿʼ ಕೂಡ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಆಗ ಯೆಮೆನ್‌ ಕಾನೂನು ಪ್ರಕಾರ ಮೇಲ್ಮನವಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿತ್ತು.

ಕುಟುಂಬ ಉದ್ದೇಶಿಸಿರುವ ಯಾವುದೇ ರಾಜಿ ಮಾತುಕತೆಗಳಲ್ಲಿ ಪಕ್ಷಕಾರನಾಗುವಂತೆ ಕೇಂದ್ರ ಸರ್ಕಾರಕ್ಕೆ ತಾನು ಆದೇಶಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆದರೂ ಸಮನ್ವಯ ಪೀಠ ಆ ಆದೇಶದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕುಟುಂಬದ ಪ್ರಯಾಣಕ್ಕೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ಅಗತ್ಯವಿದ್ದರೆ ಅವರಿಗೆ ದುಭಾಷಿಗಳನ್ನು ಒದಗಿಸುವಂತೆ ಸೂಚಿಸಿತ್ತು.

Kannada Bar & Bench
kannada.barandbench.com