ಪ್ರಾಣಿ ಹಿಂಸೆ: ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅರ್ಜಿ ಕುರಿತಂತೆ ಕೇಂದ್ರ, ರಾಜ್ಯಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

ಪ್ರಾಣಿ ಹಿಂಸೆ ತಡೆ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆ ನಿಯಮಾವಳಿ ಪ್ರಶ್ನಿಸಿ ಕಪಿಲ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು.
Kapil Dev and Delhi High Court
Kapil Dev and Delhi High Court twitter

ಪ್ರಾಣಿಹಿಂಸೆ ವಿರುದ್ಧ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸುವಂತೆ ಕೋರಿ ಭಾರತ ಕ್ರಿಕೆಟ್‌ ದಿಗ್ಗಜ ಕಪಿಲ್ ದೇವ್ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ, ಪ್ರಾಣಿ ಕಲ್ಯಾಣ ಮಂಡಳಿ, ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರುಲಾ ಅವರಿದ್ದ ಪೀಠ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 19ರಂದು ನಡೆಯಲಿದೆ.

ಪ್ರಾಣಿ ಹಿಂಸೆ ತಡೆ ಕಾಯಿದೆಯ ನಿಯಮಾವಳಿ ವಿರುದ್ಧ ಕಪಿಲ್ ದೇವ್, ಅವರ ಪತ್ನಿ ರೋಮಿ ದೇವ್ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಅಂಜಲಿ ಗೋಪಾಲನ್ ಅವರು ನ್ಯಾಯಲಯದ ಕದ ತಟ್ಟಿದ್ದರು. ಬೀದಿ ನಾಯಿಗಳನ್ನು ಮಾರಣಾಂತಿಕ ಕೋಣೆಗಳಲ್ಲಿಟ್ಟು 'ನಾಶ' ಮಾಡಲು ಕಾಯಿದೆ ಅವಕಾಶ ನೀಡುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆಯ ಸೆಕ್ಷನ್ 11(1), 11(3) (ಬಿ) ಮತ್ತು 11(3) (ಸಿ) ಹಾಗೂ ಭಾರತೀಯ ದಂಡ ಸಂಹಿತೆಯ 428 ಸೆಕ್ಷನ್‌ (ರೂಪಾಯಿ ಮೌಲ್ಯದ ಜಾನುವಾರವನ್ನು ಕೊಲ್ಲುವ ಅಥವಾ ಅಂಗ ಊನಗೊಳಿಸುವ ಮೂಲಕ ದುಷ್ಕೃತ್ಯ), 429ನೇ ಸೆಕ್ಷನ್‌ (ಐವತ್ತು ರೂಪಾಯಿ ಮೌಲ್ಯದ ಜಾನುವಾರವನ್ನು ಕೊಲ್ಲುವ ಅಥವಾ ಅಂಗ ಊನಗೊಳಿಸುವ ಮೂಲಕ ದುಷ್ಕೃತ್ಯ) ಅಸಾಂವಿಧಾನಿಕವಾಗಿವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ನಿಯಮಾವಳಿಗಳಿಗೆ ಯಾವುದೇ ಪ್ರತಿಬಂಧಕ ಪರಿಣಾಮಗಳಿಲ್ಲ ಮತ್ತು ಪ್ರಾಣಿಗಳ ಜೀವವನ್ನು ಇವು ಕ್ಷುಲ್ಲಕವಾಗಿಸಿದ್ದು ದೇಶದೊಳಗೆ ಪ್ರಾಣಿಗಳ ವಿರುದ್ಧದ ಕ್ರೌರ್ಯ, ಚಿತ್ರಹಿಂಸೆ ಹಾಗೂ ಅಪರಾಧದ ಅಗಾಧತೆ ಎದುರಿಸಲು ಅಸಮರ್ಪಕವಾಗಿರುವುದರಿಂದ ಸ್ಪಷ್ಟವಾಗಿ ಇವು ಅಂಕುಶ ಹೊಂದಿಲ್ಲ ಎಂದು ವಾದಿಸಲಾಗಿತ್ತು.

“ಹತ್ತು ರೂಪಾಯಿ ಮೌಲ್ಯದ ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗ ಊನಗೊಳಿಸುವ ಗಂಭೀರ ಅಪರಾಧಕ್ಕಾಗಿ, ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಇಲ್ಲವೇ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತಿತ್ತು. ಇದೇ ವೇಳೆ ದನಗಳನ್ನು ಕೊಂದು ಅಥವಾ ಊನಗೊಳಿಸುವುದರ ಮೂಲಕ ಅದೇ ದುಷ್ಕೃತ್ಯದ ಅಪರಾಧಕ್ಕಾಗಿ  ರೂ. 50 ಜುಲ್ಮನೆ ಹಾಗೂ 5 ವರ್ಷಗಳ ಅವಧಿಗೆ  ಸೆರೆವಾಸ ಅಥವಾ ದಂಡ ಇಲ್ಲವೇ ಎರಡನ್ನೂ ವಿಧಿಸಲಾಗುತ್ತಿತ್ತು. ಆದ್ದರಿಂದ, ಪ್ರಾಣಿಯನ್ನು ಕೊಲ್ಲುವ ಅಥವಾ ಅಂಗಗಳನ್ನು ಊನಗೊಳಿಸುವ ಭೀಕರ ಅಪರಾಧಕ್ಕಾಗಿ, ಪ್ರಾಣಿಗಳ ಮಾರಾಟ ಮತ್ತು ಉಪಯುಕ್ತತೆಯ ಆಧಾರದ ಮೇಲೆ ದಂಡದ ಮೊತ್ತ ವಿಭಿನ್ನವಾಗಿದ್ದು ಇದು ತರ್ಕರಹಿತ ಹಾಗೂ ಸಂಪೂರ್ಣ ಅಸಮಂಜಸವಾಗಿದೆ” ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com