ನ್ಯಾಯಾಂಗ ನಿಂದನೆ: ಆರ್‌ಎಸ್‌ಎಸ್‌ ಚಿಂತಕ ಗುರುಮೂರ್ತಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದ ದೆಹಲಿ ಹೈಕೋರ್ಟ್

ಗುರುಮೂರ್ತಿ ಅವರು ವ್ಯಕ್ತಪಡಿಸಿದ ಕ್ಷಮಾಪಣೆ ಮತ್ತು ವಿಷಾದಕ್ಕೆ ನ್ಯಾಯಾಲಯ ಪೂರಕವಾಗಿ ಸ್ಪಂದಿಸಿತು.
ನ್ಯಾಯಾಂಗ ನಿಂದನೆ: ಆರ್‌ಎಸ್‌ಎಸ್‌ ಚಿಂತಕ ಗುರುಮೂರ್ತಿ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿದ ದೆಹಲಿ ಹೈಕೋರ್ಟ್

ದೆಹಲಿ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿದ್ದಾಗ ಒಡಿಶಾ ಹೈಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಅವರ ವಿರುದ್ಧ ಟ್ವೀಟ್‌ ಮಾಡಿದ್ದ ಹಿನ್ನೆಲೆಯಲ್ಲಿ ಹೂಡಲಾಗಿದ್ದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣದಿಂದ ಆರ್‌ಎಸ್‌ಎಸ್ ಚಿಂತಕ ಎಸ್‌ ಗುರುಮೂರ್ತಿ ಅವರನ್ನು ದೆಹಲಿ ಹೈಕೋರ್ಟ್‌ ಗುರುವಾರ ಮುಕ್ತಗೊಳಿಸಿದೆ.

ಗುರುಮೂರ್ತಿ ಅವರು ಲಿಖಿತ ಪ್ರತಿಕ್ರಿಯೆ ನೀಡಿದ್ದಾರಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಾದ ವ್ಯಕ್ತಪಡಿಸಲು ಖುದ್ದು ಹಾಜರಾಗಿದ್ದನ್ನು ಗಮನಿಸಿದ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಗೌರಂಗ್ ಕಾಂತ್ ಅವರಿದ್ದ ವಿಭಾಗೀಯ ಪೀಠ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಿತು.

ನ್ಯಾ. ಮುರಳೀಧರ್ ಅವರು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಹಿರಿಯ ನ್ಯಾಯವಾದಿ ಪಿ ಚಿದಂಬರಂ ಅವರ ಬಳಿ ಕಿರಿಯ ವಕೀಲರಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದರು ಎಂದು ಎಸ್‌ ಗುರುಮೂರ್ತಿ ಅವರು ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಟ್ವೀಟ್‌ ಅನ್ನು ನ್ಯಾ. ಮುರಳೀಧರ್‌ ನೇತೃತ್ವದ ಪೀಠ ಪರಿಗಣನೆಗೆ ತೆಗೆದುಕೊಂಡಿತ್ತು. ಆಗ ನ್ಯಾ. ಮುರಳೀಧರ್‌ ತಾವು ಚಿದಂಬರಂ ಅವರ ಬಳಿ ಕೆಲಸ ನಿರ್ವಹಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಂತಹ ಟ್ವೀಟ್‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದೇ ಎಂಬುದನ್ನು ಗಮನಿಸುವಂತೆ ಆಗ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆಗಿದ್ದ ತುಷಾರ್‌ ಮೆಹ್ತಾ (ಈಗ ಅವರು ಸಾಲಿಸಿಟರ್‌ ಜನರಲ್‌) ಮತ್ತು ವಕೀಲ ವರ್ಗಕ್ಕೆ ನ್ಯಾಯಾಲಯ ಸೂಚಿಸಿತ್ತು.

ದೆಹಲಿ ಹೈಕೋರ್ಟ್ ವಕೀಲರ ಸಂಘ (ಡಿಎಚ್‌ಸಿಬಿಎ) ಗುರುಮೂರ್ತಿ ಅವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಇದು ಪ್ರೇರಣೆಯಾಗಿತ್ತು. 2018ರಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಪ್ರಕರಣ ಐದು ವರ್ಷಗಳಿಂದ ಬಾಕಿ ಉಳಿದಿದ್ದು ಎರಡೂ ಕಡೆಯವರು ಈ ಪ್ರಕರಣಕ್ಕೆ ಅಂತ್ಯ ಹಾಡಬೇಕು ಎಂದು ದೆಹಲಿ ಹೈಕೋರ್ಟ್‌ ಹೇಳಿತ್ತು.

ವಕೀಲರ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ನ್ಯಾಯವಾದಿ ರಾಕೇಶ್‌ ಟಿಕು ಅವರು ಗುರುಮೂರ್ತಿ ಅವರ ಕ್ಷಮೆಯಾಚನೆಯನ್ನು ಪ್ರಸ್ತಾಪಿಸಿ ಪ್ರಕರಣ ಮುಕ್ತಾಯಗೊಳಿಸಬಹುದು ಎಂದು ಪೀಠಕ್ಕೆ ತಿಳಿಸಿದರು.

ಇದನ್ನು ಮನ್ನಿಸಿದ ನ್ಯಾ. ಮೃದುಲ್‌ ನ್ಯಾಯಾಲಯ ಮತ್ತು ನ್ಯಾಯಾಧೀಶರ ಘನತೆ ಎಂಬುದು ಪತ್ರಿಕಾ ವರದಿ ಅಥವಾ ಟ್ವೀಟ್‌ಗಳನ್ನು ಅವಲಂಬಿಸಿರುವುದಿಲ್ಲ. ಆದರೆ ಅದು ತನ್ನ ಖಚಿತ ತಳಹದಿಯ ಮೇಲೆ ನಿಂತಿರುತ್ತದೆ ಎಂದರು.

"ಕೆಲವೊಮ್ಮೆ ಚಿಕಿತ್ಸೆಯು ಕಾಯಿಲೆಗಿಂತ ಕೆಟ್ಟದಾಗಿರುತ್ತದೆ. ಗೌರವಾನ್ವಿತ ನ್ಯಾಯಮೂರ್ತಿಗಳೊಬ್ಬರ ಹೆಸರನ್ನು ಅನಗತ್ಯವಾಗಿ ಈ ವಿವಾದಕ್ಕೆ ಎಳೆದು ತರಲಾಗಿದ್ದು, ಪ್ರತಿಬಾರಿಯೂ ಅದು ವರದಿಯಾಗಿದೆ. ಯಾವುದಕ್ಕಾಗಿ? ನಾವು ನಮ್ಮ (ನ್ಯಾಯಾಂಗದ) ಘನತೆಗಾಗಿ ಪತ್ರಿಕಾ ವರದಿ ಮತ್ತು ಟ್ವೀಟ್ ಅನ್ನು ಅವಲಂಬಿಸಿದ್ದೇವೆ ಎಂದು ನೀವು ಖಂಡಿತಾ ಭಾವಿಸಿದ್ದೀರಾ? ಖಚಿತ ತಳಹದಿಯ ಮೇಲೆ ನಮ್ಮ ಘನತೆ ನಿಂತಿದೆ. ನ್ಯಾಯೋಚಿತವಾದ ಅಥವಾ ನ್ಯಾಯೋಚಿತವಲ್ಲದ ಟೀಕೆಗಳ ಮೇಲೆ ನಮ್ಮ ಘನತೆ ಅವಲಂಬಿತವಾಗಿಲ್ಲ" ಎಂದರು.

Kannada Bar & Bench
kannada.barandbench.com