ಕಾನೂನಿನ ರಕ್ಷಣೆಯ ಅನುಪಸ್ಥಿತಿಯಲ್ಲಿ, ಕರುಣಾಮಯಿ ವ್ಯಕ್ತಿಗಳು ದಯಾಪರತೆಯಿಂದ ವರ್ತಿಸುವುದು ಮತ್ತು ರಸ್ತೆ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವುದು ಅಸಾಧ್ಯ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ [ಕಾಂತಾ ವರ್ಸಸ್ ಗುರ್ವಿಂದರ್ ಕಪೂರ್ ಮತ್ತು ಎಎನ್ಆರ್].
ಚಾಲಕನಾಗಿ ಕೆಲಸ ಮಾಡುವಾಗ ಸಂತ್ರಸ್ತೆಯ ಪತಿ ಸಾವನ್ನಪ್ಪಿಲ್ಲ, ಆದರೆ ರಸ್ತೆ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದ ವೇಳೆ ಅವರು ಮರಣ ಹೊಂದಿದ್ದಾರೆ ಎಂಬ ಕಾರಣ ನೀಡಿ ಪರಿಹಾರವನ್ನು ನಿರಾಕರಿಸಿದ್ದ ವಿಧವೆಗೆ ನ್ಯಾಯಮೂರ್ತಿ ಧರ್ಮೇಶ್ ಶರ್ಮಾ ಅವರು ಪರಿಹಾರ ನೀಡುವಂತೆ ಆದೇಶಿಸಿದರು.
ಉದ್ಯೋಗ ಪರಿಹಾರ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ವ್ಯಕ್ತಿಯ ವಿಧವೆಗೆ ಪರಿಹಾರವನ್ನು ನಿರಾಕರಿಸಿದ್ದ ನೌಕರರ ಪರಿಹಾರ ಆಯುಕ್ತರ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯ ಮೇರೆಗೆ ನ್ಯಾಯಾಲಯವು ಈ ಕ್ರಮ ಕೈಗೊಂಡಿದೆ.
ಅಪಘಾತದ ಸಂದರ್ಭಗಳನ್ನು ಪರಿಶೀಲಿಸಿದಾಗ, ಅಪಘಾತಕ್ಕೆ ಸಾಕ್ಷಿಯಾದ ಪ್ರೇಕ್ಷಕರು ಅಥವಾ ಉತ್ತಮ ವ್ಯಕ್ತಿ ಆಗಿರುವ ಯಾರಾದರೂ ಮುಂದೆ ಬಂದು ಅಪಘಾತ ಸಂತ್ರಸ್ತರಿಗೆ ತಕ್ಷಣದ ಸಹಾಯ ಒದಗಿಸಿದ ಕಾರಣಕ್ಕೆ ಅವರು ಕಿರುಕುಳ ಅಥವಾ ಬೆದರಿಕೆ ಎದುರಿಸುವಂತಾಗಬಾರದು ಎಂದು ನ್ಯಾಯಾಂಗ ತತ್ವಶಾಸ್ತ್ರದ ಅರ್ಥವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
"ನ್ಯಾಯಾಂಗ ತತ್ವಶಾಸ್ತ್ರದ ತಾರ್ಕಿಕ ಗುರಿಗಳ ವಿಸ್ತರಿಸಿ ನೋಡಿದರೆ , ಸಾರ್ವಜನಿಕ ರಸ್ತೆ / ಹೆದ್ದಾರಿಯಲ್ಲಿ ಗಾಯಗೊಂಡವರಿಗೆ ಸಹಾಯ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಇಡೀ ಸನ್ನಿವೇಶದ ವಿಶಾಲ ಅಥವಾ ದೊಡ್ಡ ಅಂಶವನ್ನು ತೀರ್ಪು ನೀಡುವಾಗ ಸ್ಪಷ್ಟವಾಗಿ ಕಡೆಗಣಿಸಲಾಗಿದೆ" ಎಂದು ಪೀಠ ಹೇಳಿದೆ.
ಮೃತರು ತಮ್ಮ ಟ್ರಕ್ ಅನ್ನು ಚಾಲನೆ ಮಾಡುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ಎದುರು ಬದಿಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ನೋಡಿದರು. ಅವರು ತಮ್ಮ ಟ್ರಕ್ ಅನ್ನು ನಿಲ್ಲಿಸಿ, ಇಳಿದು ಗಾಯಗೊಂಡವರಿಗೆ ಸಹಾಯ ಮಾಡಿದರು. ಅದರೆ, ಅವರು ಟ್ರಕ್‌ಗೆ ಹಿಂದಿರುಗುವ ವೇಳೆ ವೇಗವಾಗಿ ಬಂದ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಹಾದಿಯಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.
ಘಟನೆಯ ನಂತರ, ವಿಧವೆಯು ವಾಹನದ ನೋಂದಾಯಿತ ಮಾಲೀಕರಿಂದ ಪರಿಹಾರ ಕೋರಿದರು. ಆದರೆ, ಅವರು ಪರಿಹಾರ ನೀಡಲು ನಿರಾಕರಿಸಿದರು. ಪ್ರಕರಣವು ನಂತರ ಪರಿಹಾರ ಆಯುಕ್ತರನ್ನು ತಲುಪಿತು. ಅಪಘಾತಕ್ಕೀಡಾದ ಜನರಿಗೆ ಸಹಾಯ ಮಾಡಲು ಚಾಲಕ ತನ್ನ ವಾಹನವನ್ನು ಬಿಟ್ಟು ತೆರಳಿದ್ದಾನೆ. ಆತ ತನ್ನ ಕರ್ತವ್ಯದ ಭಾಗವಾಗಿ ಹಾಗೆ ಮಾಡಿಲ್ಲ. ಹಾಗಾಗಿ, ಅವನ ಉದ್ಯೋಗದಾತರು ಆತನ ಸಂಬಂಧಿಕರಿಗೆ ಪರಿಹಾರ ಪಾವತಿಸಲು ಜವಾಬ್ದಾರರಲ್ಲ ಎಂದು ಅಭಿಪ್ರಾಯಪಟ್ಟರು.
ಅದಾಗ್ಯೂ, ಆಯುಕ್ತರ ಆದೇಶವು "ಕಾನೂನು ಮತ್ತು ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಅನೈತಿಕವೂ, ತಪ್ಪಾದುದೂ ಆಗಿದೆ. ನೌಕರರ ಪರಿಹಾರ ಆಯೋಗ ಕಾಯಿದೆಯ ಉದ್ದೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ" ಎಂದು ಹೈಕೋರ್ಟ್ ಹೇಳಿದೆ.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಒಬ್ಬ ವ್ಯಕ್ತಿಯು ಪವಿತ್ರ ಬೈಬಲಿನಲ್ಲಿ ಲ್ಯೂಕನ ಸುವಾರ್ತೆಯಲ್ಲಿನ ಉಪಮೆಯ ಪ್ರಕಾರ 'ಪರೋಪಕಾರಿ (ಸಮರಿಟನ್)' ಎನಿಸಿಕೊಳ್ಳುತ್ತಾನೆ ಎಂದು ನ್ಯಾಯಾಲಯ ಹೇಳಿತು. ಅಂತಿಮವಾಗಿ ಪ್ರಕರಣವನ್ನು ಮತ್ತೆ ಪರಿಶೀಲಿಸಲು ಪರಿಹಾರ ಆಯುಕ್ತರಿಗೆ ಮರಳಿಸಿತು. ಇದೇ ವೇಳೆ, ಸುದೀರ್ಘ ಕಾನೂನು ಹೋರಾಟ ನಡೆಸಿರುವ ವಿಧವೆಗೆ ಮಧ್ಯಂತರ ಪರಿಹಾರವಾಗಿ ರೂ. 5 ಲಕ್ಷ ನೀಡುವಂತೆ ಸೂಚಿಸಿತು. ಪರಿಹಾರ ಆಯುಕ್ತರು ಪ್ರಕರಣವನ್ನು ಸೂಕ್ತವಾಗಿ ಪರಿಗಣಿಸಿ ಪರಿಹಾರವನ್ನು ಎರಡು ತಿಂಗಳೊಳಗೆ ನಿಗದಿಪಡಿಸಲು ಸಹ ಸೂಚಿಸಿತು.
[ಆದೇಶ ಓದಿ]