ಜೈಲುಗಳಲ್ಲಿ ವೈದ್ಯಕೀಯ ಸೌಲಭ್ಯ ಸುಧಾರಣೆ: ಸಮಿತಿ ರಚಿಸಿದ ದೆಹಲಿ ಹೈಕೋರ್ಟ್

ಜೈಲು ಕೈದಿಗಳ ಆರೋಗ್ಯದ ಅಗತ್ಯತೆಗಳನ್ನು ಈಡೇರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಸರ್ಕಾರದ ಗೃಹ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೈದಿಗಳ ವೈದ್ಯಕೀಯ ಹಕ್ಕುಗಳು
ಕೈದಿಗಳ ವೈದ್ಯಕೀಯ ಹಕ್ಕುಗಳು

ದೆಹಲಿಯ ಜೈಲುಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಅಲ್ಲಿನ ಹೈಕೋರ್ಟ್ ಸರ್ಕಾರದ ಆರೋಗ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದೆ [ಶ್ರೀ ಅಮನ್‌ದೀಪ್ ಸಿಂಗ್ ಧಲ್  ಮತ್ತು ಜಾರಿ ನಿರ್ದೇಶನಾಲಯ ನಡುವಣ  ಪ್ರಕರಣ]

ಬಂದೀಖಾನೆ ಮಹಾನಿರ್ದೇಶಕರು , ದೆಹಲಿ ಕಾರಾಗೃಹಗಳ ಮುಖ್ಯ ವೈದ್ಯಕೀಯ ಅಧಿಕಾರಿ, ಜಿಲ್ಲಾ ನ್ಯಾಯಾಲಯಗಳ ಇಬ್ಬರು ಹಿರಿಯ ಜೈಲು ಸಂದರ್ಶಕ ನ್ಯಾಯಾಧೀಶರು, ದೆಹಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ವಕೀಲರಾದ ಸಂಜಯ್ ದಿವಾನ್ ಮತ್ತು ಗಾಯತ್ರಿ ಪುರಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಕಾರಾಗೃಹಗಳಲ್ಲಿನ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಮತ್ತು ಎಲ್ಲಾ ಕೈದಿಗಳಿಗೆ ಸಮಾನವಾದ ಆರೋಗ್ಯ ಸೇವೆಯನ್ನು ಒದಗಿಸಲು ತನಗೆ ಒಂದು ತಿಂಗಳ ಅವಧಿಯಲ್ಲಿ ಸಲಹೆಗಳನ್ನು ನೀಡುವಂತೆ ಪೀಠ ಸೂಚಿಸಿದೆ. ಹೃದಯ ಸ್ತಂಭನ, ರಕ್ತಸ್ರಾವದಂತಹ ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿಯ ಜೀವ ಉಳಿಸಲು ಮೊದಲ ಕೆಲವು ನಿಮಿಷಗಳು ಅಮೂಲ್ಯವಾಗಿರುವುದರಿಂದ ಆಸ್ಪತ್ರೆಯಲ್ಲಿ ಸೌಲಭ್ಯಗಳು ಸೂಕ್ತ ಸಮಯದಲ್ಲಿ ದೊರೆಯುತ್ತವೆಯೇ ಎಂದು ಸಮಿತಿಯು ನ್ಯಾಯಾಲಯಕ್ಕೆ ನಿರ್ದಿಷ್ಟವಾಗಿ ತಿಳಿಸಬೇಕು ಎಂದು ಸೂಚಿಸಿದೆ.

ಜೈಲು ಕೈದಿಗಳ ಆರೋಗ್ಯ ಅಗತ್ಯತೆಗಳನ್ನು ಈಡೇರಿಸಲಾಗಿದೆಯೇ ಹಾಗೂ ಕಾರಾಗೃಹಗಳಲ್ಲಿ ಮೂಲಸೌಕರ್ಯಗಳನ್ನು ನಿರ್ವಹಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಗೃಹ ಕಾರ್ಯದರ್ಶಿ ಮತ್ತು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿಗೆ ನ್ಯಾಯಮೂರ್ತಿ ಸ್ವರಣ ಕಾಂತ ಶರ್ಮಾ ನಿರ್ದೇಶನ ನೀಡಿದರು.

ಜೈಲು ಔಷಧಾಲಯಗಳ ಉಸ್ತುವಾರಿ ವೈದ್ಯರು, ಮುಖ್ಯ ವೈದ್ಯಕೀಯ ಅಧಿಕಾರಿಗಳಿಗೆ ಅವಶ್ಯಕತೆಗಳ ಪಟ್ಟಿ ಒದಗಿಸಬೇಕು. ನಂತರ, ಮುಖ್ಯ ವೈದ್ಯಕೀಯ ಅಧಿಕಾರಿಗಳು ಆ ಪಟ್ಟಿಯನ್ನು ವಾರಕ್ಕೊಮ್ಮೆ ಬಂದೀಖಾನೆ ಮಹಾನಿರ್ದೇಶಕರಿಗೆ ಸಲ್ಲಿಸಬೇಕು. ಆ ಬಳಿಕ ಮಹಾನಿರ್ದೇಶಕರು ಜೈಲುಗಳಿಗೆ ಸಂದರ್ಶನ ನೀಡುವ ನ್ಯಾಯಾಂಗ ಅಧಿಕಾರಿಗಳಿಗೆ ಅದನ್ನು ತಿಳಿಸಬೇಕು ಎಂದು ನ್ಯಾಯಾಲಯ ವಿವರಿಸಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆರೋಪಿಯಾಗಿರುವ ಅಮನ್‌ ದೀಪ್ ಸಿಂಗ್ ಧಲ್ ಅವರು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿತು.

ತಮಗೆ ಜೈಲಿನಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ. ಲಸಿಕೆ, ಅರವಳಿಕೆ ಸಾಧನಗಳ ಕೊರತೆ ಇದೆ ಎಂದು ಧಲ್‌ ದೂರಿದ್ದರು. ಅವರ ವಾದ ಪುರಸ್ಕರಿಸಿದ ನ್ಯಾಯಾಲಯ ಜೈಲು ಔಷಧಾಲಯ ಸಲ್ಲಿಸಿದ ವರದಿಯಲ್ಲಿ ಕೂಡ ವೈದ್ಯಕೀಯ ಸೌಲಭ್ಯಗಳ ಕೊರತೆ ಬಗ್ಗೆ ಶೋಷನೀಯ ಸ್ಥಿತಿ ಇರುವುದನ್ನು ಉಲ್ಲೇಖಿಸಲಾಗಿದೆ ಎಂದು ತಿಳಿಸಿತು. ಅಂತಿಮವಾಗಿ ಧಲ್‌ ಅವರಿಗೆ ಮಧ್ಯಂತರ ಜಾಮೀನು ನೀಡದೇ ಹೋದರೂ ಆತನನ್ನು ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಆದೇಶಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Mr Amandeep Singh Dhall v Directorate of Enforcement.pdf
Preview
Kannada Bar & Bench
kannada.barandbench.com