
ಆಹಾರ ಪದ್ಧತಿ ಮತ್ತು ಆಯುರ್ವೇದದ ಮೂಲಕ 4ನೇ ಹಂತದ ಕ್ಯಾನ್ಸರ್‌ನಿಂದ ತಮ್ಮ ಪತ್ನಿ ಚೇತರಿಸಿಕೊಂಡಿರುವ ಕುರಿತು ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಅವರು ಮಾಡಿರುವ ಪ್ರತಿಪಾದನೆಯ ವೈಜ್ಞಾನಿಕ ಅಧ್ಯಯನ ಮಾಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಪರಿಗಣಿಸಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ [ದಿವ್ಯಾ ರಾಣಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಎಕ್ಸ್ ಮತ್ತು ಮೆಟಾದಲ್ಲಿ ಸಿಧು ನೀಡಿರುವ ಹೇಳಿಕೆಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕುವಂತೆ ಪಿಐಎಲ್ ಕೋರಿತ್ತು.
ಸಿಧು ಅವರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದು ಅವರ ವಾಕ್ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲಾ ಅವರಿದ್ದ ಪೀಠ ಹೇಳಿದೆ.
"ಅವರು ಕೇವಲ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಂತರ ವೈದ್ಯರ ಸಲಹೆ ಪಡೆದಿರುವುದಾಗಿ ಹೇಳಿದ್ದಾರೆ. ಅದು ಅವರ ವಾಕ್ ಸ್ವಾತಂತ್ರ್ಯ. ನಿಮ್ಮ ವಾಕ್ ಸ್ವಾತಂತ್ರ್ಯದ ಮೂಲಕ ನೀವು ಅವರ ಪ್ರತಿಪಾದನೆಗಳನ್ನು ಪ್ರಶ್ನಿಸಿದ್ದೀರಿ. ಈ ದೇಶದ ವಾಕ್ ಸ್ವಾತಂತ್ರ್ಯದಲ್ಲಿ ನಮಗೆ ನಂಬಿಕೆ ಇದೆ. ಇದು ನಮ್ಮ (ನ್ಯಾಯಾಂಗದ) ಕ್ಷೇತ್ರವಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹೇಳಿದರು
ಅರ್ಜಿದಾರರು ಸಿಧು ಅವರ ಅಭಿಪ್ರಾಯಗಳನ್ನು ಒಪ್ಪದಿದ್ದರೆ ಅವುಗಳನ್ನು ಓದುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಟಿವಿ ಧಾರಾವಾಹಿಯೊಂದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿಂದೆ ಪಿಐಎಲ್ ಸಲ್ಲಿಸಲಾಗಿತ್ತು. ಅರ್ಜಿದಾರರಿಗೆ ಟಿವಿ ನೋಡದಂತೆ ಹೇಳಿದೆವು ಎಂದು ಸಿಜೆ ತಿಳಿಸಿದರು.
ಸಿಧು ಅವರು ತಾವು ಹೇಳಿದ್ದನ್ನು ಪಾಲಿಸಬೇಕೆಂದು ನಿಮ್ಮನ್ನು ಕೇಳಿಲ್ಲ. ತಾವೇನು ಮಾಡಿದರೋ ಅದನ್ನು ಅವರು ಹೇಳಿದ್ದಾರೆ. . ವಕೀಲರೇ ಇದರ ಬದಲು ನೀವು ಸಿಗರೇಟ್ ಮತ್ತು ಮದ್ಯದ ತಯಾರಿಕೆಯ ವಿರುದ್ಧ ಪಿಐಎಲ್ ಸಲ್ಲಿಸಿ. ಅದು ಆರೋಗ್ಯಕರವಲ್ಲ ಎಂದು ನೀವು ಸಹ ಒಪ್ಪುತ್ತೀರಿ ಎಂದು ಖಾತ್ರಿಯಿದೆ ಎಂಬುದಾಗಿ ನ್ಯಾ. ಗೆಡೆಲಾ ತಿಳಿಸಿದರು. ನಂತರ ಅರ್ಜಿದಾರರು ಪಿಐಎಲ್ ಹಿಂಪಡೆದರು.