ಸಿಬಿಐ ಮತ್ತು ಇ ಡಿ ಪ್ರಕರಣಗಳಲ್ಲಿ ಮನೀಶ್ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಮನೀಶ್ ಸಿಸೋಡಿಯಾ ಫೆಬ್ರವರಿ 26, 2023ರಿಂದ ಬಂಧನದಲ್ಲಿದ್ದಾರೆ; ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಇದು ಎರಡನೇ ಸುತ್ತಿನ ದಾವೆಯಾಗಿದೆ.
Manish Sisodia, Delhi HC
Manish Sisodia, Delhi HC

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇ ಡಿ ದಾಖಲಿಸಿರುವ ಪ್ರಕರಣಗಳಲ್ಲಿ ದೆಹಲಿ ಮಾಜಿ ಉಪಮುಖ್ಯಮಂತ್ರಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ಜಾಮೀನು ನಿರಾಕರಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್ 3ರ ಅಡಿಯಲ್ಲಿ ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆಯಾಗಿರುವುದನ್ನು ಗಮನಿಸಿದ ನ್ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಜಾಮೀನು ಅರ್ಜಿ ತಿರಸ್ಕರಿಸಿದರು.

ಸಿಸೋಡಿಯಾ ಅವರ ನಡೆ "ಪ್ರಜಾಪ್ರಭುತ್ವದ ತತ್ವಗಳಿಗೆ ಮಾಡಿದ ದೊಡ್ಡ ದ್ರೋಹ" ಎಂದು ನ್ಯಾಯಾಲಯ ಅವರ ಜಾಮೀನು ಅರ್ಜಿ ತಿರಸ್ಕರಿಸುವ ಸಂದರ್ಭದಲ್ಲಿ ಹೇಳಿದೆ.

ಇಲೆಕ್ಟ್ರಾನಿಕ್ ಪುರಾವೆಗಳು ಸೇರಿದಂತೆ ನಿರ್ಣಾಯಕ ಪುರಾವೆಗಳನ್ನು ನಾಶಪಡಿಸುವ ಕೃತ್ಯಗಳಲ್ಲಿ ಸಿಸೋಡಿಯಾ ತೊಡಗಿದ್ದರು. ಈ ನಿಟ್ಟಿನಲ್ಲಿ ಎರಡು ಮೊಬೈಲ್ ಫೋನ್‌ಗಳು ಹಾನಿಗೊಳಗಾಗಿವೆ ಎಂದು ಅದು ತಿಳಿಸಿದೆ.

ಸಿಸೋಡಿಯಾ ಅವರು ದೆಹಲಿ ಸರ್ಕಾರದಲ್ಲಿ ಪ್ರಮುಖ ಹುದ್ದೆಯಲ್ಲಿದ್ದು ಅನೇಕ ಖಾತೆಗಳನ್ನು ನಿರ್ವಹಿಸುತ್ತಿದ್ದರು. ಅವರು ಎಎಪಿಯ ಹಿರಿಯ ನಾಯಕರಾಗಿರುವುದರಿಂದ ಪ್ರಭಾವಿ ವ್ಯಕ್ತಿಯಾಗಿದ್ದಾರೆ ಎಂಬ ಅಂಶವನ್ನು ಪೀಠ ಗಣನೆಗೆ ತೆಗೆದುಕೊಂಡಿದೆ.

ಅರ್ಜಿದಾರರು ತಮ್ಮ ಪರವಾಗಿ ಜಾಮೀನು ಮಂಜೂರು ಮಾಡುವಂತೆ ವಾದ ಮಂಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.

ದೆಹಲಿ ಅಬಕಾರಿ ನೀತಿ  ಸಾರ್ವಜನಿಕ ಬೆಂಬಲ ಪಡೆದಿದೆ ಎಂದು ತೋರಿಸಲು ಸಿಸೋಡಿಯಾ ಮೋಸಗೊಳಿಸುವ ವಿಧಾನ ಬಳಸಿದರು. ಆದರೆ, ವಾಸ್ತವದಲ್ಲಿ, ಕೆಲ ವ್ಯಕ್ತಿಗಳನ್ನು ಶ್ರೀಮಂತಗೊಳಿಸಲು ನೀತಿ ರೂಪಿಸಲಾಗಿತ್ತು. ಇದು ಭ್ರಷ್ಟಾಚಾರದ ಒಂದು ರೂಪ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಸಾರ್ವಜನಿಕ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದ್ದಾರೆ ಎಂದು ಪೀಠ ಹೇಳಿದೆ.

ಅಲ್ಲದೆ ಪ್ರಕರಣ ವಿಳಂಬಗೊಳ್ಳಲು ಸಿಬಿಐ ಮತ್ತು ಇ ಡಿ ಕಾರಣ ಎನ್ನಲಾಗದು ಎಂದು ಕೂಡ ನ್ಯಾಯಾಲಯ ತಿಳಿಸಿದೆ.

ಆದರೂ ಪ್ರಕರಣದ ವಿಚಾರಣೆ ವಿಳಂಬಗೊಳಿಸಲು ಎಲ್ಲಾ ಆರೋಪಿಗಳು ಒಟ್ಟಿಗೆ ಯತ್ನಿಸಿದ್ದಾರೆ ಎಂಬ ವಿಚಾರಣಾ ನ್ಯಾಯಾಲಯದ ಅವಲೋಕನಗಳನ್ನು ಹೈಕೋರ್ಟ್‌ ಒಪ್ಪಲಿಲ್ಲ.

ವಿಚಾರಣಾ ನ್ಯಾಯಾಲಯ ಇತ್ತೀಚೆಗೆ ಸಿಬಿಐ ಮತ್ತು ಇ ಡಿ ಹೂಡಿದ್ದ ಎರಡೂ ಪ್ರಕರಣಗಳಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು, ಇದು ಹೈಕೋರ್ಟ್‌ನಲ್ಲಿ ಪ್ರಸ್ತುತ ಮನವಿಗೆ ಕಾರಣವಾಯಿತು. ಇದು ಸಿಸೋಡಿಯಾ ಸಲ್ಲಿಸಿರುವ ಎರಡನೇ ಸುತ್ತಿನ ಜಾಮೀನು ಅರ್ಜಿಯಾಗಿದೆ.

Kannada Bar & Bench
kannada.barandbench.com