ದೆಹಲಿ ಗಲಭೆ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿ 9 ಮಂದಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ಮೊಹಮ್ಮದ್ ಸಲೀಂ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮೀರನ್ ಹೈದರ್, ಶಾದಾಬ್ ಅಹ್ಮದ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ಗುಲ್ಫಿಶಾ ಫಾತಿಮಾ ಪ್ರಕರಣದಲ್ಲಿ ಜಾಮೀನು ಕೋರಿದ್ದ ಒಂಬತ್ತು ಆರೋಪಿಗಳು.
Sharjeel Imam, Umar Khalid, Khalid Saifi and Gulfisha Fatima
Sharjeel Imam, Umar Khalid, Khalid Saifi and Gulfisha Fatima
Published on

ಈಶಾನ್ಯ ದೆಹಲಿಯಲ್ಲಿ 2020ರಲ್ಲಿ ನಡೆದಿದ್ದ  ಗಲಭೆಗೆ ಸಂಬಂಧಿಸಿದಂತೆ ಭಾರೀ ಪಿತೂರಿ ನಡೆದಿದೆ ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್‌, ಶಾರ್ಜೀಲ್ ಇಮಾಮ್ ಸಹಿತ 9 ಜನರಿಗೆ ದೆಹಲಿ ಹೈಕೋರ್ಟ್‌ ಮಂಗಳವಾರ ಜಾಮೀನು ನಿರಾಕರಿಸಿದೆ.

ಶಾರ್ಜೀಲ್ ಇಮಾಮ್, ಉಮರ್ ಖಾಲಿದ್, ಮೊಹಮ್ಮದ್ ಸಲೀಂ ಖಾನ್, ಶಿಫಾ ಉರ್ ರೆಹಮಾನ್, ಅಥರ್ ಖಾನ್, ಮೀರನ್ ಹೈದರ್, ಶಾದಾಬ್ ಅಹ್ಮದ್, ಅಬ್ದುಲ್ ಖಾಲಿದ್ ಸೈಫಿ ಹಾಗೂ ಗುಲ್ಫಿಶಾ ಫಾತಿಮಾ ಪ್ರಕರಣದಲ್ಲಿ ಜಾಮೀನು ಕೋರಿದ್ದ ಒಂಬತ್ತು ಆರೋಪಿಗಳು.

Also Read
ಊಹೆಗಳ ಆಧಾರದಲ್ಲಿ ಸಿಎಎ ಪ್ರತಿಭಟನಾಕಾರರ ವಿರುದ್ಧ ದೆಹಲಿ ಗಲಭೆ ದಾವೆ: ದೆಹಲಿ ನ್ಯಾಯಾಲಯ

ವಿಚಾರಣಾ ನ್ಯಾಯಾಲಯ  ತಮ್ಮ ವಿರುದ್ಧದ ಆರೋಪಗಳನ್ನು ಇನ್ನೂ ನಿಗದಿಪಡಿಸಿಲ್ಲ. ಹೀಗಾಗಿ ವಿಚಾರಣೆಯಲ್ಲಿ ವಿಳಂಬ ಉಂಟಾಗಿ ತಮ್ಮನ್ನು ದೀರ್ಘಕಾಲದವರೆಗೆ ಜೈಲಿನಲ್ಲಿಡಲಾಗಿದೆ. ಈ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಆರೋಪಿಗಳು ಕೋರಿದ್ದರು. ನ್ಯಾಯಮೂರ್ತಿಗಳಾದ ನವೀನ್ ಚಾವ್ಲಾ ಮತ್ತು ಶಾಲಿಂದರ್ ಕೌರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.

"ಎಲ್ಲಾ ಮೇಲ್ಮನವಿಗಳನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ತಸ್ಲೀಮ್ ಅಹ್ಮದ್  ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಂದು ಹೈಕೋರ್ಟ್‌ನ ಮತ್ತೊಂದು ಪೀಠ ಪ್ರತ್ಯೇಕ ಆದೇಶ ನೀಡಿ ವಜಾಗೊಳಿಸಿತ್ತು.

ಉಮರ್ ಖಾಲಿದ್ ಅವರನ್ನು ಸೆಪ್ಟೆಂಬರ್ 2020 ರಲ್ಲಿ ಬಂಧಿಸಲಾಗಿತ್ತು. ಕ್ರಿಮಿನಲ್ ಪಿತೂರಿ, ಗಲಭೆ, ಕಾನೂನುಬಾಹಿರ ಸಭೆ, ಹಾಗೂ ಯುಎಪಿಎ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಮಾಡಲಾಗಿತ್ತು. ಅಂದಿನಿಂದ ಜೈಲಿನಲ್ಲಿರುವ ಅವರು ಸಲ್ಲಿಸಿರುವ ಎರಡನೇ ಸುತ್ತಿನ ಜಾಮೀನು ಅರ್ಜಿ ಇದಾಗಿದೆ. ಖಾಲಿದ್‌ಗೆ ಎರಡು ಬಾರಿ ವಿಚಾರಣಾ ನ್ಯಾಯಾಲಯ ಮತ್ತು ಒಂದು ಬಾರಿ ಹೈಕೋರ್ಟ್ ಜಾಮೀನು ನಿರಾಕರಿಸಿವೆ.

ವಿಚಾರಣಾ ನ್ಯಾಯಾಲಯವು ಮೊದಲು  ಮಾರ್ಚ್ 2022ರಲ್ಲಿ ಅವರಿಗೆ ಜಾಮೀನು ನಿರಾಕರಿಸಿತು. ನಂತರ ಅವರು ಹೈಕೋರ್ಟ್ ಅನ್ನು ಸಂಪರ್ಕಿಸಿದರು. ಆದರೆ  ಅದು  ಅಕ್ಟೋಬರ್ 2022ರಲ್ಲಿ ಪರಿಹಾರವನ್ನು ನಿರಾಕರಿಸಿದ ಪರಿಣಾಮ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋದರು. ಮೇ 2023 ರಲ್ಲಿ, ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರ ಪ್ರತಿಕ್ರಿಯೆ ಕೇಳಿತು. ನಂತರ ಖಾಲಿದ್‌ ಅವರ ಮನವಿಯನ್ನು 14 ಬಾರಿ ಮುಂದೂಡಲಾಯಿತು. ಫೆಬ್ರವರಿ 14, 2024 ರಂದು ಸಂದರ್ಭ ಬದಲಾಗಿರುವುದನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಿಂದ ತಮ್ಮ ಜಾಮೀನು ಅರ್ಜಿಯನ್ನು ಅವರು  ಹಿಂತೆಗೆದುಕೊಂಡರು.

ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ  ಮತ್ತು  ಪಂಕಜ್ ಮಿತ್ತಲ್‌ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ  ಫೆಬ್ರವರಿ 14 ರಂದು  ಪ್ರಕರಣದ ವಿಚಾರಣೆ ನಡೆಸಬೇಕಿತ್ತು.  ಖಾಲಿದ್ ಪರ ವಕೀಲರಾದ ಹಿರಿಯ ವಕೀಲ  ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

Also Read
ದೆಹಲಿ ಗಲಭೆ ವೇಳೆ ಮುಸ್ಲಿಮರನ್ನು ಥಳಿಸಿ ರಾಷ್ಟ್ರಗೀತೆ ಹಾಡುವಂತೆ ಪೊಲೀಸರ ಒತ್ತಾಯ: ತನಿಖೆಗೆ ದೆಹಲಿ ನ್ಯಾಯಾಲಯ ಆದೇಶ

"ಸನ್ನಿವೇಶಗಳ ಬದಲಾವಣೆಯಿಂದಾಗಿ ನಾವು (ಜಾಮೀನು ಅರ್ಜಿ) ಹಿಂಪಡೆಯಲು ಬಯಸುತ್ತೇವೆ ಸೂಕ್ತ ಪರಿಹಾರಕ್ಕಾಗಿ ವಿಚಾರಣಾ ನ್ಯಾಯಾಲಯಕ್ಕೆ ಹೋಗುತ್ತೇವೆ" ಎಂದು  ಸಿಬಲ್ ಹೇಳಿದ್ದರು. ಕಳೆದ ಮೇ 28 ರಂದು ವಿಚಾರಣಾ ನ್ಯಾಯಾಲಯವು ಅವರ ಎರಡನೇ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಉಮರ್ ಖಾಲಿದ್ ಪರವಾಗಿ ಹಿರಿಯ ವಕೀಲ ತ್ರಿದೀಪ್ ಪೈಸ್ ವಾದ ಮಂಡಿಸಿದರು. ದೆಹಲಿ ಪೊಲೀಸರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಜಾಮೀನು ಅರ್ಜಿಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ರೆಹಮಾನ್ ಅವರನ್ನು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಪ್ರತಿನಿಧಿಸಿದರೆ, ಅಬ್ದುಲ್ ಖಾಲಿದ್ ಸೈಫಿ ಪರ ಮತ್ತೊಬ್ಬ ಹಿರಿಯ ವಕೀಲ ರೆಬೆಕಾ ಜಾನ್ ವಾದ ಮಂಡಿಸಿದರು.

Kannada Bar & Bench
kannada.barandbench.com