ಗುರದ್ವಾರದಲ್ಲಿ ಸಮುದಾಯ ಸೇವೆ ಸಲ್ಲಿಸುವಂತೆ ಆರೋಪಿಗೆ ಸೂಚಿಸಿ ಕೊಲೆಯತ್ನದ ಪ್ರಕರಣ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಪಕ್ಷಗಳ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಪ್ರಕರಣವನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು.
Gurudwara Bangla Sahib
Gurudwara Bangla Sahib
Published on

21 ವರ್ಷ ವಯಸ್ಸಿನ ಯುವಕನೊಬ್ಬನ ವಿರುದ್ಧದ ಕೊಲೆ ಯತ್ನ ಪ್ರಕರಣವನ್ನು ರದ್ದುಗೊಳಿಸಿದ ದೆಹಲಿ ಹೈಕೋರ್ಟ್‌, ಬಾಂಗ್ಲಾ ಸಾಹಿಬ್‌ ಗುರುದ್ವಾರದಲ್ಲಿ ಒಂದು ತಿಂಗಳ ಕಾಲ ಸಮುದಾಯ ಸೇವೆ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ ಡಿಎಚ್‌ಸಿಬಿಎ ವಕೀಲರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ, ನಿರ್ಮಲ್‌ ಛಾಯಾ ಪ್ರತಿಷ್ಠಾನ, ದೆಹಲಿ ಪೊಲೀಸ್‌ ಕಲ್ಯಾಣ ನಿಧಿ, ಯುದ್ಧದಲ್ಲಿ ಗಾಯಗೊಂಡ ಯೋಧರ ಕಲ್ಯಾಣ ನಿಧಿಗಳಲ್ಲಿ ತಲಾ ರೂ 25 ಸಾವಿರ ರೂಪಾಯಿಗಳನ್ನು ಠೇವಣಿ ಇಡುವಂತೆ ಪೀಠ ತಿಳಿಸಿದೆ.

ಪಕ್ಷಗಳ ನಡುವೆ ಸಂಧಾನ ಏರ್ಪಟ್ಟಿದ್ದರಿಂದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಬ್ರಮಣಿಯನ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಆರೋಪಿ ವಿಷಾದ ವ್ಯಕ್ತಪಡಿಸಿದ್ದು ಈ ಮಧ್ಯೆ ದೂರುದಾರರೂ ಕೂಡ ವಿಚಾರಣೆ ಮುಂದುವರೆದರೆ ಆರೋಪಿಯ ಭವಿಷ್ಯ ಹಾಳಾಗುತ್ತದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Also Read
ವಿದ್ಯಾರ್ಥಿನಿಯರನ್ನು ವಿವಸ್ತ್ರಗೊಳಿಸಿದ ಪ್ರಕರಣ: ರಾಜಿ ಹಿನ್ನೆಲೆಯಲ್ಲಿ ಎಫ್‌ಐಆರ್ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಆರೋಪಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ ಎಂಬುದನ್ನು ಗಮನಿಸಿದ ಪೀಠ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಅಧಿಕಾರ ವ್ಯಾಪ್ತಿ ಚಲಾಯಿಸಲು ಮುಂದಾಯಿತು. ಅಲ್ಲದೆ ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಾರದು ಮತ್ತು ಭವಿಷ್ಯದಲ್ಲಿ ಅಪರಾಧವನ್ನು ಪುನರಾವರ್ತಿಸಬಾರದು ಎಂದು ಆರೋಪಿಗೆ ತಿಳಿಸಿತು, ದೂರುದಾರರ ಹೊಟ್ಟೆಗೆ ಇರಿದ ಆರೋಪ ಯುವಕನ ಮೇಲಿತ್ತು. ಘಟನೆಯೊಂದರಲ್ಲಿ ದೂರುದಾರ ಯುವಕನ ಕಪಾಳಕ್ಕೆ ಹೊಡೆದದ್ದರಿಂದ ಅವಮಾನಿತನಾಗಿದ್ದ ಯುವಕ ದೂರುದಾರನಿಗೆ ಇರಿದಿದ್ದ. ಪೋಷಕರು ಮತ್ತು ಹಿತೈಷಿಗಳ ಮಧ್ಯಸ್ಥಿಕೆಯಿಂದಾಗಿ ಪ್ರಕರಣದಲ್ಲಿ ರಾಜಿ ಏರ್ಪಟ್ಟಿತ್ತು.

ರಾಜಿ ಕಾರಣಕ್ಕೆ ಸೆಕ್ಷನ್ 307ರ (ಕೊಲೆ ಯತ್ನ) ಅಡಿ ದಾಖಲಾದ ಪ್ರಕರಣಗಳನ್ನು ರದ್ದುಪಡಿಸುವುದನ್ನು ಕಡ್ಡಾಯಗೊಳಿಸದಂತೆ ಸುಪ್ರೀಂಕೋರ್ಟ್ ತೀರ್ಪುಗಳು ಹೇಳಿದ್ದರೂ, ಕೆಲ ಸಂದರ್ಭಗಳಲ್ಲಿ ಆರೋಪಿಗಳ ಹಿನ್ನೆಲೆ, ನಡತೆ ಹಾಗೂ ರಾಜಿ ಹೇಗೆ ಏರ್ಪಟ್ಟಿತು ಎಂಬುದನ್ನು ಗಮನಿಸಿ ಪ್ರಕರಣ ರದ್ದುಪಡಿಸಲಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

Kannada Bar & Bench
kannada.barandbench.com