ಸಚಿವೆ ಸ್ಮೃತಿ , ಪುತ್ರಿ ವಿರುದ್ಧ ಹಾಕಿರುವ ಪೋಸ್ಟ್‌ ತೆಗೆಯಲು ಕಾಂಗ್ರೆಸ್‌ ನಾಯಕರಿಗೆ ದೆಹಲಿ ಹೈಕೋರ್ಟ್‌ ನಿರ್ದೇಶನ

ಕಾಂಗ್ರೆಸ್‌ ನಾಯಕರು 24 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳನ್ನು ತೆಗೆಯದಿದ್ದರೆ, ಸಾಮಾಜಿಕ ಜಾಲತಾಣ ಕಂಪೆನಿಗಳು ಅವುಗಳನ್ನು ತೆಗೆಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Smriti Irani, Jairam Ramesh and Pawan Khera
Smriti Irani, Jairam Ramesh and Pawan KheraFacebook

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಗೋವಾದಲ್ಲಿ ನಡೆಸುತ್ತಿದ್ದಾರೆ ಎನ್ನಲಾದ ಬಾರ್‌ ಮತ್ತು ರೆಸ್ಟೋರೆಂಟ್‌ಗೆ ಸಂಬಂಧಿಸಿದಂತೆ ಈಚೆಗೆ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಸ್ಮೃತಿ ಮತ್ತು ಅವರ ಪುತ್ರಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಮಾನಹಾನಿಕರ ಪೋಸ್ಟ್‌ಗಳನ್ನು ತೆಗೆಯುವಂತೆ ಕಾಂಗ್ರೆಸ್‌ ನಾಯಕರಾದ ಜೈರಾಮ್‌ ರಮೇಶ್‌, ಪವನ್‌ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರಿಗೆ ಶುಕ್ರವಾರ ದೆಹಲಿ ಹೈಕೋರ್ಟ್‌ ಆದೇಶ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಹಾಕಿರುವ ಪೋಸ್ಟ್‌ಗಳ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರ ನೇತೃತ್ವದ ಏಕಸದಸ್ಯ ಪೀಠವು ರಮೇಶ್‌, ಖೇರಾ ಮತ್ತು ಡಿಸೋಜಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

“ವಾಸ್ತವಿಕ ಅಂಶಗಳನ್ನು ಪರಿಶೀಲಿಸದೇ ಫಿರ್ಯಾದಿ ವಿರುದ್ಧ ಆರೋಪ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ನನಗನ್ನಿಸಿದೆ. ಪ್ರತಿವಾದಿಗಳು ನಡೆಸಿರುವ ಮಾಧ್ಯಮ ಗೋಷ್ಠಿಗೆ ಸಂಬಂಧಿಸಿದ ಟ್ವೀಟ್‌ ಮತ್ತು ಪುನರ್‌ ಟ್ವೀಟ್‌ಗಳಿಂದ ಫಿರ್ಯಾದಿಯ ಗೌರವಕ್ಕೆ ತೀವ್ರ ಧಕ್ಕೆಯಾಗಿದೆ. ಮೇಲ್ನೋಟಕ್ಕೆ ಪ್ರಕರಣವು ಫಿರ್ಯಾದಿ ಪರವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಮಾಧ್ಯಮ ಗೋಷ್ಠಿಯ ಸಂದರ್ಭದಲ್ಲಿ ಸ್ಮೃತಿ ಮತ್ತು ಅವರ ಪುತ್ರಿ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಟ್ವೀಟರ್‌ನಿಂದ ಹಂಚಿಕೊಂಡಿರುವ ವಿಚಾರಗಳನ್ನು ತೆಗೆಯುವಂತೆ ಪ್ರತಿವಾದಿಗಳಿಗೆ ನ್ಯಾಯಾಲಯ ನಿರ್ದೇಶಿಸಿದ್ದು, ಮಧ್ಯಂತರ ಪ್ರತಿಬಂಧಕಾದೇಶ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

ಕಾಂಗ್ರೆಸ್‌ ನಾಯಕರು 24 ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳನ್ನು ತೆಗೆಯದಿದ್ದರೆ, ಪ್ರತಿವಾದಿಗಳಾದ 4-6 (ಸಾಮಾಜಿಕ ಮಾಧ್ಯಮ ವೇದಿಕೆಗಳು) ಸಾಮಾಜಿಕ ಜಾಲತಾಣ ಕಂಪೆನಿಗಳು ಅವುಗಳನ್ನು ತೆಗೆಯಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Related Stories

No stories found.
Kannada Bar & Bench
kannada.barandbench.com