
ತನ್ನ ಜಾಹೀರಾತಿನಲ್ಲಿ ಪ್ರತಿಸ್ಪರ್ಧಿ ಸರ್ಫ್ ಎಕ್ಸೆಲ್ ಮಾರ್ಜಕ ಉತ್ಪನ್ನವನ್ನು ಅವಹೇಳನ ಮಾಡಿದ್ದ ಪದಗುಚ್ಛಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಈಚೆಗೆ ಘಡಿ ಮಾರ್ಜಕ ತಯಾರಿಸುವ ಆರ್‌ಎಸ್‌ಪಿಎಲ್‌ಗೆ ನಿರ್ದೇಶನ ನೀಡಿದೆ.
ಸರ್ಫ್ ಎಕ್ಸೆಲ್ ತಯಾರಕರಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಸಲ್ಲಿಸಿದ್ದ ಮೊಕದ್ದಮೆ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಈ ಆದೇಶ ಹೊರಡಿಸಿದ್ದಾರೆ.
ಜೂನ್ 24ರೊಳಗೆ ತನ್ನ ಜಾಹೀರಾತು ಬದಲಿಸಿ ಪ್ರಸಾರ ಮುಂದುವರಿಸುವಂತೆ ನ್ಯಾಯಾಲಯ ಆರ್‌ಎಸ್‌ಪಿಎಲ್‌ಗೆ ನಿರ್ದೇಶನ ನೀಡಿತು.
ಸರ್ಫ್ ಎಕ್ಸೆಲ್ ಉತ್ಪನ್ನವನ್ನು ಸ್ಪಷ್ಟವಾಗಿ ಅವಹೇಳನ ಮಾಡಿರುವ "ಕರೆ ಬಡೀ ಬಡೀ ಪಾತೇ ಪರ್ ಧೋ ನಹಿ ಪಾತೇ" (ನಿಮ್ಮ ಉತ್ಪನ್ನ ದೊಡ್ಡ ದೊಡ್ಡ ಮಾತುಗಳನ್ನಾಡುತ್ತದೆ ಆದರೆ ಒಗೆಯುವುದಿಲ್ಲ)," ನಾ ನಾ ಯೇ ಧೋಕಾ ಹೈ" (ಇಲ್ಲ ಇಲ್ಲ ಇದು ಮೋಸ), ಹಾಗೂ "ಇಸ್ಕೆ ಜಾಗ್ ಅಚ್ಚೆ ಹೈ, ದಾಮ್ ಅಚ್ಚೇ ಹೈ" (ಇದರ ನೊರೆ ಚೆನ್ನಾಗಿದೆ ದುಡ್ಡು ಬಹಳ ಇದೆ) ಎಂಬ ಮೂರು ವಾಕ್ಯಗಳನ್ನು ತೆಗೆದು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಆರ್‌ಪಿಸಿಎಲ್ ಕಂಪೆನಿ ತನ್ನ ಘಡಿ ಡಿಟರ್ಜೆಂಟ್ ಪ್ರಚಾರಕ್ಕಾಗಿ ಪ್ರಮುಖ ನಟ ರವಿ ಕಿಶನ್ ಅವರನ್ನು ಒಳಗೊಂಡ ನಾಲ್ಕು ಜಾಹೀರಾತುಗಳನ್ನು ಈ ತಿಂಗಳ ಆರಂಭದಲ್ಲಿ (ಜೂನ್ 2025) ಪ್ರಸಾರ ಮಾಡಿತ್ತು. ಇದಕ್ಕೆ ಸರ್ಫ್ ಎಕ್ಸೆಲ್ ತಯಾರಕ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಆಕ್ಷೇಪ ವ್ಯಕ್ತಪಡಿಸಿತ್ತು.
ತಮ್ಮ ಉತ್ಪನ್ನಗಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವುದಕ್ಕೆ ಅನುಮತಿ ಇದೆಯಾದರೂ ಅವಹೇಳನ ಇಲ್ಲವೇ ಕಳಂಕ ಯತ್ನಕ್ಕೆ ಅನುಮತಿಸಲಾಗದು ಎಂದು ನ್ಯಾಯಾಲಯ ನುಡಿದಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 16ರಂದು ನಡೆಯಲಿದೆ.