ಜಗಳವೊಂದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಕೋರಿದ್ದ ಎರಡೂ ಕಡೆಯ ಪಕ್ಷಕಾರರಿಗೆ ಯಮುನಾ ನದಿಯ ಸ್ವಚ್ಛತಾ ಕಾರ್ಯದಲ್ಲಿ 45 ದಿನ ಪಾಲ್ಗೊಳ್ಳುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಷರತ್ತು ವಿಧಿಸಿ ಎಫ್‌ಐಆರ್ ರದ್ದುಪಡಿಸಿತು [ಮಮತಾ ದೇವಿ ಮತ್ತಿತರರು ಹಾಗೂ ದೆಹಲಿ ಸರ್ಕಾರ ನಡುವಣ ಪ್ರಕರಣ].
ಮಕ್ಕಳ ಪೋಷಕರಿಬ್ಬರ ನಡುವಿನ ಸಣ್ಣ ಜಗಳದಿಂದಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ಪ್ರಕರಣ ಇತ್ಯರ್ಥದ ಹೊಸ್ತಿಲಲ್ಲಿರುವುದನ್ನು ಗಮನಿಸಿದ ನ್ಯಾ. ಜಸ್ಮೀತ್ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿತು.
“ಅರ್ಜಿದಾರರು ಮತ್ತು ಪ್ರತಿವಾದಿಗಳು 45 ದಿನಗಳ ಕಾಲ ಯಮುನಾ ನದಿ ಸ್ವಚ್ಛಗೊಳಿಸುವ ಕೆಲಸ ಮಾಡಲಿದ್ದಾರೆ. ಅವರು ತೃಪ್ತಿದಾಯಕವಾಗಿ ಸೇವೆ ಸಲ್ಲಿಸಿದ್ದು ಅರಿತ ಬಳಿಕ ಅವರಿಗೆ ʼದೆಹಲಿ ಯಮುನಾ ಶುದ್ಧೀಕರಣ ಜಲ ಮಂಡಳಿʼ ಪ್ರಮಾಣಪತ್ರ ನೀಡಲಿದೆ. ಪ್ರತಿಯೊಬ್ಬ ಅರ್ಜಿದಾರ ಮತ್ತು ಪ್ರತಿವಾದಿ ಈ ಪ್ರಮಾಣಪತ್ರವನ್ನು ಸ್ವೀಕರಿಸಿದ ಒಂದು ವಾರದ ಒಳಗೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪ್ರಾಮಾಣಿಕ ಯತ್ನ ಮತ್ತು ಶ್ರಮದೊಂದಿಗೆ ಎಲ್ಲಾ ಅರ್ಜಿದಾರರು ಮತ್ತು ಪ್ರತಿವಾದಿಗಳು ಯಮುನಾ ನದಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿತು.
ದೂರುದಾರರು ಮತ್ತು ಅರ್ಜಿದಾರರ ಮಕ್ಕಳ ನಡುವಿನ ಗಲಾಟೆಯಿಂದಾಗಿ ಹೊಡೆದಾಟ ನಡೆದಿತ್ತು. ಘಟನೆಯಲ್ಲಿ ಎರಡೂ ಕಡೆಯ ಪೋಷಕರಿಗೆ ಗಾಯಗಳಾಗಿದ್ದವು. ವಿಷಯ ತಿಳಿದ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಪ್ರಕರಣದ ನ್ಯಾಯಾಲಯದ ಮೆಟ್ಟಿಲೇರಿತ್ತು. ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದ ಎರಡೂ ಕಡೆಯವರು ಎಫ್‌ಐಆರ್ ವಜಾಗೊಳಿಸುವಂತೆ ಕೋರಿದ್ದರು.
ಎಫ್‌ಐಆರ್ ವಜಾಗೊಳಿಸಿದ ನ್ಯಾಯಾಲಯವು ಇದಕ್ಕೆ ಷರತ್ತಾಗಿ 45 ದಿನಗಳ ಕಾಲ ಯಮುನಾ ನದಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಉಭಯ ಪಕ್ಷಕಾರರಿಗೆ ಆದೇಶಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: