ಅಮುಲ್ ಹಾಲು ಉತ್ಪನ್ನಗಳ ಬಗ್ಗೆ ಭೀತಿ ಮೂಡಿಸುವ ಬರಹ ತೆಗೆದುಹಾಕುವಂತೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್

ಡಿಚ್‌ಡೈರಿ ಡಾಟ್ ಇನ್ ಎಂಬ ಜಾಲತಾಣ ಹಾಗೂ ʼಬಾಯ್ಕಾಟ್ ಮಿಲ್ಕ್ʼ ಎಂಬ ಫೇಸ್ಬುಕ್ ಪುಟದಲ್ಲಿ ಲೇಖನ ಪ್ರಕಟಗೊಂಡಿತ್ತು.
ಅಮುಲ್ ಹಾಲು ಉತ್ಪನ್ನಗಳ ಬಗ್ಗೆ ಭೀತಿ ಮೂಡಿಸುವ ಬರಹ ತೆಗೆದುಹಾಕುವಂತೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್
Published on

ಗುಜರಾತ್‌ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ನಿಯಮಿತ (ಜಿಸಿಎಂಎಂಎಫ್‌ಎಲ್‌) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ ಡಿಚ್‌ಡೈರಿ ಡಾಟ್‌ ಇನ್‌ ಎಂಬ ಜಾತಾಣ ಹಾಗೂ ಬಾಯ್ಕಾಟ್‌ ಮಿಲ್ಕ್‌ ಎಂಬ ಫೇಸ್‌ಬುಕ್‌ ಪುಟದಲ್ಲಿ ಪ್ರಕಟಗೊಂಡಿದ್ದ ಅಮುಲ್‌ ಹಾಲು ಉತ್ಪನ್ನಗಳ ಬಗ್ಗೆ ಭೀತಿ ಮೂಡಿಸುವಂತಹ ಲೇಖನವನ್ನು ತೆಗೆದು ಹಾಕುವಂತೆ ನಿರ್ದೇಶನ ನೀಡಿದೆ (ಜಿಸಿಎಂಎಂಎಫ್ ಮತ್ತು ಚೇತನ್‌ ಪಂಡಿಲ್ಯ ಮತ್ತಿತರರ ನಡುವಣ ಪ್ರಕರಣ).

ಅಲ್ಲದೆ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ ಅವರಿದ್ದ ಏಕಸದಸ್ಯ ಪೀಠ ಇಂತಹ ಯಾವುದೇ ಬಗೆಯ ಲೇಖನಗಳನ್ನು ಪ್ರಕಟಿಸದಂತೆ ಲೇಖನ ಅಪ್‌ಲೋಡ್‌ ಮಾಡಿದವರನ್ನು ಪ್ರತಿಬಂಧಿಸಿದೆ.

ಅರ್ಜಿದಾರ ಜಿಸಿಎಂಎಂಎಫ್, “ಅಮುಲ್”ಮತ್ತು ಅದರ ಇನ್ನಿತರ ಲಾಂಛನಗಳ ನೋಂದಾಯಿತ ಒಡೆತನ ಹೊಂದಿದೆ. ಪ್ರತಿವಾದಿಗಳ ಜಾಲತಾಣ ಡಿಚ್‌ಡೈರಿ.ಇನ್, ನಿರ್ದಿಷ್ಟವಾಗಿ ಅಮುಲ್ ಉತ್ಪನ್ನಗಳನ್ನು ಗುರಿಯಾಗಿಸಿಕೊಂಡು, ಸಾರ್ವಜನಿಕರ ಮನಸ್ಸಿನಲ್ಲಿ ಪಕ್ಷಪಾತದ ಧೋರಣೆ, ಭೀತಿ ಹಾಗೂ ಪೂರ್ವಾಗ್ರಹ ಉಂಟುಮಾಡಿತ್ತು ಎಂಬುದು ಜಿಸಿಎಂಎಂಎಫ್ ಕಳವಳವಾಗಿತ್ತು.

ಜಿಸಿಎಂಎಂಎಫ್ (ಅರ್ಜಿದಾರ) ಮತ್ತು ಅದರ ಸದಸ್ಯರು ಪ್ರಾಣಿಗಳ ಮೇಲೆ ಕ್ರೌರ್ಯವನ್ನು ಎಸಗುತ್ತಾರೆ ಎಂದು ಹಾಗೂ ಡೈರಿ ಉತ್ಪನ್ನಗಳು ಕ್ಯಾನ್ಸರ್ ಮುಂತಾದ ಹಲವಾರು ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತವೆ ಎನ್ನುವ ಸುಳ್ಳು ನಿರೂಪಣೆಯನ್ನು ಪ್ರತಿವಾದಿ ಚೇತನ್ ಪಾಂಡಿಲ್ಯ ಅವರು ಉತ್ತೇಜಿಸಿದ್ದರು ಎಂದು ಅರ್ಜಿದಾರರು ವಾದ ಮಂಡಿಸಿದ್ದರು.

Also Read
ಕಾರಿನಲ್ಲಿ ಧೂಮಪಾನ ಮಾಡುತ್ತ ವೀಡಿಯೊ ಕಲಾಪದಲ್ಲಿ ಭಾಗಿಯಾದ ವಕೀಲರಿಗೆ ರೂ.10,000 ದಂಡ ವಿಧಿಸಿದ ಗುಜರಾತ್ ಹೈಕೋರ್ಟ್

ಕಿಜೋ ನ್ಯೂಟ್ರಿಷನ್, ಗುಡ್ ಡಾಟ್, ಫಿಟ್‌ಜಾರ್ ಮುಂತಾದ ವಿವಿಧ ಬ್ರಾಂಡ್‌ಗಳ ಸಸ್ಯಾಧಾರಿತ ಉತ್ಪನ್ನಗಳನ್ನು ಪ್ರತಿವಾದಿ ಸ್ವತಃ ಪ್ರಚಾರ ಮಾಡಿ ಮಾರುತ್ತಿದ್ದಾರೆ. ಆದ್ದರಿಂದ, ಸುಳ್ಳು ಸುದ್ದಿ ಹರಡಿ ಅಮುಲ್ ಉತ್ಪನ್ನಗಳ ಗೌರವ ಕಡಿಮೆ ಮಾಡಲು ಯತ್ನಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ತಾನು ಕಷ್ಪಪಟ್ಟು ಸಂಪಾದಿಸಿದ ಗೌರವ ಮತ್ತು ಖ್ಯಾತಿಗೆ ಪ್ರತಿವಾದಿಯ ಮಾನಹಾನಿಕರ ಮತ್ತು ಅಪಮಾನಕರ ನಡವಳಿಕೆ ದೊಡ್ಡ ಪೆಟ್ಟು ನೀಡಿದೆ ಎಂದು ವಾದಿಸಲಾಗಿತ್ತು.

ಜಿಸಿಎಂಎಂಎಫ್ ವಿಶ್ವದ 9ನೇ ಅತಿದೊಡ್ಡ ಹಾಲು ಸಂಸ್ಕರಣಾ ಸಂಸ್ಥೆಯಾಗಿದ್ದು 1994 ರಿಂದ ‘ದ ಟೇಸ್ಟ್‌ ಆಫ್‌ ಇಂಡಿಯಾʼ ಎಂಬ ಅಡಿಬರಹದೊಂದಿಗೆ ಪ್ರಸಿದ್ಧಿಗೆ ಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು,

ಸಸ್ಯಜನ್ಯ ಪಾನೀಯಗಳಿಗೆ ಹೋಲಿಸಿದರೆ ಡೈರಿ ಹಾಲು ನೈಸರ್ಗಿಕವಾಗಿ ಹೆಚ್ಚು ಪೋಷಕಾಂಶಗಳಿಂದ ಕೂಡಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ, ಹಾಲಿನ ಗುಣಮಟ್ಟವನ್ನು ಕಾಪಾಡಲು ಹಲವಾರು ನಿಯಮಗಳು ಅಸ್ತಿತ್ವದಲ್ಲಿವೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಯಿತು.

ಪ್ರತಿವಾದಿಯ ಹಕ್ಕುಗಳನ್ನು ನಿರಾಕರಿಸುವ ಪ್ರಯತ್ನದಲ್ಲಿ, ಸಸ್ಯ ಆಧಾರಿತ ಪಾನೀಯಗಳಿಗೆ ಹೋಲಿಸಿದರೆ ಡೈರಿ ಹಾಲು ನೈಸರ್ಗಿಕವಾಗಿ ಹೆಚ್ಚು ಪೋಷಕಾಂಶಗಳಿಂದ ಕೂಡಿದೆ ಎಂದು ಫಿರ್ಯಾದಿ ವಾದಿಸಿದರು. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ, ಹಾಲಿನ ಗುಣಮಟ್ಟವನ್ನು ಕಾಪಾಡಲು ಹಲವಾರು ನಿಯಮಗಳು ಅಸ್ತಿತ್ವದಲ್ಲಿವೆ ಎಂದು ಫಿರ್ಯಾದುದಾರರು ಹೇಳಿದ್ದರು.

ತನ್ನ ಮುಂದಿರಿಸಲಾದ ವಾದವನ್ನು ಗಮನದಲ್ಲಿರಿಸಿಕೊಂಡು ನ್ಯಾಯಾಲಯವು, ಅರ್ಜಿದಾರರು ಮೇಲ್ನೋಟಕ್ಕೇ ಸಮ್ಮತವಾದ ಏಕಪಕ್ಷೀಯ ಮಧ್ಯಂತರ ಆದೇಶವನ್ನು ನೀಡುವಂತಹ ವಾದವನ್ನು ಸಾಧಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿತು.

ವಾದ ಆಲಿಸಿದ ನ್ಯಾಯಾಲಯ “ಡಿಚ್‌ಡೈರಿ ಜಾಲತಾಣದಲ್ಲಿ ಲಭ್ಯ ಇರುವ ʼವೈಟ್‌ ಲೈ ಆಫ್‌ ಅಮುಲ್‌ ಅಂಡ್‌ ಬ್ಲಾಕ್‌ ಟ್ರುತ್‌ ಆಫ್‌ ಅನಿಮಲ್‌ ಮಿಲ್ಕ್‌ ಎಂಬ ಲೇಖನವನ್ನು ತಡೆಹಿಡಿಯಬೇಕು ಮತ್ತು ಮುಂದಿನ ವಿಚಾರಣೆಯವರೆಗೆ ಅಂತಹ ಯಾವುದೇ ಬಗೆಯ ಲೇಖನವನ್ನು ಜಾಲತಾಣದಲ್ಲಾಗಲೀ ಫೇಸ್‌ಬುಕ್‌ ಪುಟದಲ್ಲಾಗಲೀ ಪ್ರಕಟಿಸುವಂತಿಲ್ಲ” ಎಂದು ಆದೇಶಿಸಿತು. ಪ್ರಕರಣದ ಸಂಬಂಧ ನ್ಯಾಯಾಲಯವು ಸಮನ್ಸ್‌ ಕೂಡ ಜಾರಿಗೊಳಿಸಿತು.

2021ರ ಏಪ್ರಿಲ್‌ 6ಕ್ಕೆ ವಿಚಾರಣೆ ಮುಂದೂಡಲಾಗಿದೆ. ಎಎಸ್‌ಜಿ ಚೇತನ್ ಶರ್ಮಾ, ವಕೀಲರಾದ ಅಭಿಷೇಕ್ ಸಿಂಗ್, ಅಮಿತ್ ಗುಪ್ತಾ ಅವರು ಜಿಸಿಎಂಎಂಎಫ್ ಪರ ವಾದ ಮಂಡಿಸಿದರು. ಫೇಸ್‌ಬುಕ್‌ ಪರವಾಗಿ ವಕೀಲರಾದ ಪರಾಗ್ ತ್ರಿಪಾಠಿ, ಶಾರ್ದುಲ್ ಅಮರ್‌ಚಂದ್ ಮಂಗಲ್‌ದಾಸ್ ವಕೀಲರಾದ ತೇಜಸ್ ಕರಿಯಾ, ವರುಣ್ ಪಾಠಕ್, ಗೌಹರ್ ಮಿರ್ಜಾ, ನಯನತಾರಾ ನಾರಾಯಣ್, ಮಲಿಕಾ ಮೆಹ್ರಾ, ಆರ್‌ ತೇಜೇಶ್ ಹಾಜರಿದ್ದರು.

Kannada Bar & Bench
kannada.barandbench.com