ಎರಡು ವಿಮಾನ, 3 ಎಂಜಿನ್ ವಾಪಸ್: ಬ್ರಿಟನ್ ನ್ಯಾಯಾಲಯದ ಆದೇಶ ಪಾಲಿಸುವಂತೆ ಸ್ಪೈಸ್‌ಜೆಟ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶನ

ಸ್ಪೈಸ್ ಜೆಟ್ ಗುತ್ತಿಗೆ ಪಡೆದ ವಿಮಾನದಿಂದ ಎಂಜಿನ್‌ಗಳನ್ನು ಬೇರ್ಪಡಿಸುವುದರಿಂದ ಟಿಡಬ್ಲ್ಯೂಸಿಗೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
Spice Jet
Spice Jet

ಎರಡು ಗುತ್ತಿಗೆ ಪಡೆದ ವಿಮಾನಗಳು ಮತ್ತು ಮೂರು ಎಂಜಿನ್‌ಗಳನ್ನು ಟಿಡಬ್ಲ್ಯೂಸಿ ಏವಿಯೇಷನ್ ​​ಕ್ಯಾಪಿಟಲ್‌ಗೆ ಮರಳಿಸುವಂತೆ ಬ್ರಿಟನ್‌ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಬೇಕು ಎಂದು ಸ್ಪೈಸ್‌ಜೆಟ್‌ಗೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ನಿರ್ದೇಶಿಸಿದೆ [ಟಿಡಬ್ಲ್ಯೂಸಿ ಏವಿಯೇಷನ್ ​​ಕ್ಯಾಪಿಟಲ್‌ ಲಿಮಿಟೆಡ್‌ ಮತ್ತು ಸ್ಪೈಸ್‌ಜೆಟ್‌ ಲಿಮಿಟೆಡ್‌ ನಡುವಣ ಪ್ರಕರಣ].

ಗುತ್ತಿಗೆ ಪಡೆದ ವಿಮಾನದಿಂದ ಸ್ಪೈಸ್‌ ಜೆಟ್‌ ಎಂಜಿನ್‌ಗಳನ್ನು ಬೇರ್ಪಡಿಸಿರುವುದರಿಂದ ಟಿಡಬ್ಲ್ಯೂಸಿಗೆ ಈಗಾಗಲೇ ಸಾಕಷ್ಟು ಹಾನಿಯಾಗಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಈ ರೀತಿಯಾಗಿ ವಿಮಾನಗಳಿಂದ ಎಂಜಿನ್‌ ಬೇರ್ಪಡಿಸುವುದನ್ನು ನ್ಯಾಯಾಲಯದ ಅಭಿಪ್ರಾಯದಲ್ಲಿ ಒಪ್ಪಲಾಗದು. ಈಗ ಪ್ರತ್ಯೇಕವಾಗಿ ಬಳಸುತ್ತಿರುವ ವಿಮಾನದ ಚೌಕಟ್ಟು ಮತ್ತು ಎಂಜಿನ್‌ಗಳು ಟಿಡಬ್ಲ್ಯೂಸಿ ಪಾಲಿಗೆ ವಿಮಾನಗಳ ಮೌಲ್ಯ ಗಣನೀಯವಾಗಿ ಕುಸಿಯಲು ಕಾರಣವಾಗಬಹುದು. ಅದನ್ನು ಸ್ಪೈಸ್‌ಜೆಟ್‌ ತುಂಬಿಕೊಡದು ಎಂದು ಪೀಠ ಹೇಳಿದೆ.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2024ರಲ್ಲಿ ನೀಡಲಾದ ಮೊದಲ ಮಧ್ಯಂತರ ಆದೇಶದಲ್ಲಿ ಟಿಡಬ್ಲ್ಯೂಸಿ ರಿಸೀವರ್‌ ಆಗಿ ಎರಡು ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಅನುಮತಿಸಲಾಗಿತ್ತು. ಆದರೆ ನ್ಯಾಯಾಲಯ ಆದೇಶವಿಲ್ಲದೆ ಅವುಗಳನ್ನು ಕೊಂಡೊಯ್ಯದಂತೆ ಸೂಚಿಸಲಾಗಿತ್ತು. ಇದೇ ವೇಳೆ ಎಂಜಿನ್‌ಗಳನ್ನು ಬಳಸಲು ಸ್ಪೈಸ್‌ಜೆಟ್‌ಗೆ ಅನುಮತಿ ನೀಡಲಾಗಿತ್ತು.

ಆದರೆ ಪ್ರಸ್ತುತ ಆದೇಶದಲ್ಲಿ ಎರಡು ವಿಮಾನಗಳು ಮತ್ತು ಮೂರು ಎಂಜಿನ್‌ಗಳನ್ನು ಬೇಷರತ್ತಾಗಿ ಟಿಡಬ್ಲ್ಯೂಸಿಗೆ ಹಸ್ತಾಂತರಿಸುವಂತೆ ನಿರ್ದೇಶಿಸಲಾಗಿದೆ.

ಎಂಜಿನ್‌ಗಳ ಜೊತೆಗೆ ವಿಮಾನಗಳನ್ನು ಅವುಗಳ ಎಲ್ಲಾ ದಾಖಲೆಗಳೊಂದಿಗೆ 2024 ರ ಮೇ 28 ರೊಳಗೆ ಟಿಡಬ್ಲ್ಯೂಸಿಗೆ ಹಸ್ತಾಂತರಿಸುವಂತೆ ನಿರ್ದೇಶಿಸುವುದನ್ನು ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

ಟಿಡಬ್ಲ್ಯೂಸಿ  ಗುತ್ತಿಗೆ ನೀಡಿದ್ದ ವಿಮಾನ ಮತ್ತು ಎಂಜಿನ್‌ಗಳನ್ನು ಮರಳಿಸುವಂತೆ ಸ್ಪೈಸ್‌ಜೆಟ್‌ಗೆ ಬ್ರಿಟನ್‌ನ ನ್ಯಾಯಾಲಯ ಮಾರ್ಚ್‌ನಲ್ಲಿ ಹೊರಡಿಸಿದ್ದ ಎರಡು ಆದೇಶ ಜಾರಿಗೆ ತರುವಂತೆ ಕೋರಿ ಟಿಡಬ್ಲ್ಯೂಸಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಗುತ್ತಿಗೆ ಪಡೆದ ವಿಮಾನದಿಂದ ಮೂರು ಎಂಜಿನ್‌ಗಳನ್ನು ತೆಗೆದು ಬೇರೆ ವಿಮಾನಗಳಲ್ಲಿ ಬಳಸಲಾಗುತ್ತಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಒಪ್ಪಂದಗಳಿಗೆ ತಿದ್ದುಪಡಿ ಮಾಡಿಕೊಂಡಿದ್ದರೂ ಅವುಗಳನ್ನು ಕೂಡ ಸ್ಪೈಸ್‌ಜೆಟ್‌ ಉಲ್ಲಂಘಿಸಿದೆ ಎಂಬುದು ಟಿಡಬ್ಲ್ಯೂಸಿ ದೂರಾಗಿತ್ತು.

ಟಿಡಬ್ಲ್ಯೂಸಿ ಮತ್ತು ಸ್ಪೈಸ್‌ಜೆಟ್ ನಡುವಿನ ಒಪ್ಪಂದದಲ್ಲಿ ನ್ಯಾಯವ್ಯಾಪ್ತಿ ಇರುವ ನ್ಯಾಯಾಲಯವೆಂದು ಗೊತ್ತುಪಡಿಸಲಾಗಿದ್ದ ಬ್ರಿಟನ್‌ ನ್ಯಾಯಾಲಯ ಟಿಡಬ್ಲ್ಯೂಸಿ ಪರವಾಗಿ ಎರಡು ಆದೇಶಗಳನ್ನು ನೀಡಿತ್ತು. ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ ವಿರುದ್ಧ ಟಿಡಬ್ಲ್ಯೂಸಿ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಪ್ರಕರಣದ ಮುಂದಿನ ವಿಚಾರಣೆ ಮೇ 31 ರಂದು ನಡೆಯಲಿದೆ.

Kannada Bar & Bench
kannada.barandbench.com