ಬಹುರಾಷ್ಟ್ರೀಯ ಪಿಜ್ಜಾ ಮಾರಾಟ ಕಂಪೆನಿ ಡಾಮಿನೊಸ್ ಪಿಜ್ಜಾದ ವಾಣಿಜ್ಯ ಚಿಹ್ನೆ ಬಳಸದಂತೆ ಗಾಜಿಯಾಬಾದ್‌ನ ಡಾಮಿನಿಕ್ ಪಿಜ್ಜಾ ಮಳಿಗೆಗೆ ದೆಹಲಿ ಹೈಕೋರ್ಟ್ ಶಾಶ್ವತ ಪ್ರತಿಬಂಧಕಾಜ್ಞೆ ವಿಧಿಸಿದೆ [ಡಾಮಿನೋಸ್ ಐಪಿ ಹೋಲ್ಡರ್ ಎಲ್‌ಎಲ್‌ಸಿ ಮತ್ತಿತರರು ಹಾಗೂ ಡಾಮಿನಿಕ್ ಪಿಜ್ಜಾ ಇನ್ನಿತರರ ನಡುವಣ ಪ್ರಕರಣ].
‘ಡಾಮಿನೊಸ್ ಪಿಜ್ಜಾ’ ಮತ್ತು ‘ಡಾಮಿನಿಕ್ ಪಿಜ್ಜಾʼ ಪದಗಳು ಧ್ವನ್ಯಾತ್ಮಕವಾಗಿ ಏಕರೂಪದಲ್ಲಿವೆ ಮತ್ತು ಬಳಸಲಾದ ಚಿಹ್ನೆಗಳು ಗ್ರಾಹಕರನ್ನು ಮೋಸಗೊಳಿಸುವ ರೀತಿಯಲ್ಲಿ ತುಲನೆಯಾಗುತ್ತವೆ ಎಂದು ನ್ಯಾ. ಸಿ ಹರಿಶಂಕರ್ ಅವರಿದ್ದ ಪೀಠ ತಿಳಸಿತು.
ಸಾಮಾನ್ಯ ವಿವೇಚನೆ ಮತ್ತು ಅಪೂರ್ಣ ಸ್ಮರಣಶಕ್ತಿ ಇರುವ ಗ್ರಾಹಕರು ಡಾಮಿನೋಸ್ ಮಳಿಗೆಗೆ ಭೇಟಿ ನೀಡಿ ನಂತರ ಡಾಮಿನಿಕ್ ಪಿಜ್ಜಾ ಮಳಿಗೆಗೆ ತೆರಳಿದರೆ ಅವರು ಉತ್ಪನ್ನಗಳ ಬಗ್ಗೆ ಗೊಂದಲಕ್ಕೊಳಗಾಗುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿಗಳು ನುಡಿದರು.
ವಾಣಿಜ್ಯ ಚಿಹ್ನೆಗಳಲ್ಲಿ ಅದರಲ್ಲಿಯೂ ಉಪಭೋಗ್ಯ ವಸ್ತುಗಳು ಅಥವಾ ತಿನಿಸುಗಳಿಗೆ ಸಂಬಂಧಿಸಿದಂತೆ ಇಂತಹ ಅನುಕರಣೆಯ ಯತ್ನಗಳನ್ನು ಮನಸೋಇಚ್ಛೆಯಾಗಿ ಅನುಮತಿಸಲು ಬರುವುದಿಲ್ಲ ಎಂದು ಖಚಿತಡಿಸಿಕೊಳ್ಳುವಲ್ಲಿ ನ್ಯಾಯಾಲಯಗಳು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು.
'ಚೀಸ್ ಬರ್ಸ್ಟ್' ಮತ್ತು 'ಪಾಸ್ಟಾ ಇಟಾಲಿಯಾನೊ' ರೀತಿಯ ನೋಂದಾಯಿತ ವಾಣಿಜ್ಯ ಚಿಹ್ನೆಗಳನ್ನು ಬಳಸಿದ್ದಕ್ಕಾಗಿ ಡಾಮಿನಿಕ್ ಪಿಜ್ಜಾ ವಿರುದ್ಧ ಡಾಮಿನೋಸ್ ಮೊಕದ್ದಮೆ ಹೂಡಿತ್ತು.
ಡಾಮಿನೊಸ್ ಪಿಜ್ಜಾದ ವಾಣಿಜ್ಯ ಚಿಹ್ನೆಯನ್ನು ಡಾಮಿನಿಕ್ ಪಿಜ್ಜಾ ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದ ನ್ಯಾಯಾಲಯ ಆ ಹೆಸರು ಮಾತ್ರವಲ್ಲದೆ 'ಚೀಸ್ ಬರ್ಸ್ಟ್' ಮತ್ತು 'ಪಾಸ್ತಾ ಇಟಾಲಿಯನೋ' ಎಂಬ ಚಿಹ್ನೆಗಳನ್ನು ಬಳಸದಂತೆ ಡೊಮಿನಿಕ್ ಪಿಜ್ಜಾಕ್ಕೆ ನಿರ್ಬಂಧಿಸಿತು.
ತನ್ನ ವಾಣಿಜ್ಯ ಚಿಹ್ನೆಯನ್ನು ನೋಂದಾಯಿಸುವುದಕ್ಕಾಗಿ ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಮತ್ತು ತನ್ನ ಅಂತರ್ಜಾಲ ಡೊಮೇನ್ ಹೆಸರುಗಳನ್ನು ಡಾಮಿನೋಸ್‌ಗೆ ವರ್ಗಾಯಿಸಲು ಡಾಮಿನಿಕ್ ಪಿಜ್ಜಾಗೆ ಅದು ಆದೇಶ ನೀಡಿದೆ.