ಮೋದಿ, ಶಾ, ಅದಾನಿ ಜೇಬುಗಳ್ಳರು ಎಂದಿದ್ದ ರಾಹುಲ್ ವಿರುದ್ಧ ಕ್ರಮ: ಚುನಾವಣಾ ಆಯೋಗಕ್ಕೆ ದೆಹಲಿ ಹೈಕೋರ್ಟ್ ಸೂಚನೆ

ತೊಂದರೆಗೊಳಗಾದ ಕಕ್ಷಿದಾರರೇ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದ ನ್ಯಾಯಾಲಯ ಚುನಾವಣಾ ಭಾಷಣ ಕುರಿತು ಮಾರ್ಗಸೂಚಿ ರೂಪಿಸಲು ಇಲ್ಲವೇ ರಾಹುಲ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರಾಕರಿಸಿತು.
ರಾಹುಲ್ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ ಮತ್ತು ಗೌತಮ್ ಅದಾನಿ
ರಾಹುಲ್ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ ಮತ್ತು ಗೌತಮ್ ಅದಾನಿರಾಹುಲ್ ಗಾಂಧಿ, ಅಮಿತ್ ಶಾ (ಫೇಸ್ಬುಕ್), ನರೇಂದ್ರ ಮೋದಿ, ಗೌತಮ್ ಅದಾನಿ (ಎಕ್ಸ್)

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉದ್ಯಮಿ ಗೌತಮ್ ಅದಾನಿ ಅವರನ್ನು 'ಜೇಬುಗಳ್ಳರು' ಎಂದು ಕರೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಎಂಟು ವಾರಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಗುರುವಾರ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸೂಚಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮೊರೆ ಹೋಗಿದ್ದ ಭರತ್ ನಗರ್ ಎಂಬ ವಕೀಲರು ಪ್ರಧಾನಿ ಮೋದಿ ಅವರನ್ನು ಪನೌತಿ (ಅಪಶಕುನ) ಎಂದು ರಾಹುಲ್‌ ಗಾಂಧಿ ಜರೆದಿರುವುದೂ ಸೇರಿದಂತೆ ಅವರ ವಿವಿಧ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದರೂ ಅವರಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿಗೆ ಇಸಿಐ ಇಂದು ತಿಳಿಸಿತು.

ರಾಹುಲ್‌ ಅವರ ಹೇಳಿಕೆಗಳು ಕಳಪೆ ಅಭಿರುಚಿಯಿಂದ ಕೂಡಿವೆ ಎಂದ ನ್ಯಾಯಾಲಯು ಎಂಟು ವಾರಗಳಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.

ಆದರೆ ಅರ್ಜಿದಾರರು ಕೋರಿದ್ದಂತೆ, ರಾಹುಲ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಇಲ್ಲವೇ ಚುನಾವಣಾ ಭಾಷಣಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸಲು ನ್ಯಾಯಾಲಯ ನಿರಾಕರಿಸಿತು.

"ಭಾಷಣ ಕಳಪೆ ಅಭಿರುಚಿಯಿಂದ ಕೂಡಿರಬಹುದು. ಆದರೆ, ಈ ಬಗ್ಗೆ ತೊಂದರೆಗೊಳಗಾದ ಕಕ್ಷಿದಾರರೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ (ಪಿಎಂ ಮೋದಿ, ಅಮಿತ್ ಶಾ ಮತ್ತು ಗೌತಮ್ ಅದಾನಿ)... ಚುನಾವಣೆಯಲ್ಲಿ ಜನ ಫಲಿತಾಂಶ ನೀಡುತ್ತಾರೆ. ಎಲ್ಲದರಲ್ಲೂ ನ್ಯಾಯಾಲಯ ಹಸ್ತಕ್ಷೇಪ ಮಾಡಲಾಗದು... ದಯವಿಟ್ಟು ಅರ್ಥಮಾಡಿಕೊಳ್ಳಿ. ನಾವು ಸಂಸತ್ತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ನ್ಯಾಯಾಲಯವೊಂದು ಸಾರ್ವಭೌಮ ಸಂಸ್ಥೆಯಾದರೆ ಸಂಸತ್ತು ಸಹ ಸಾರ್ವಭೌಮ ಸಂಸ್ಥೆಯೇ ಆಗಿದೆ. ಯಾವುದೇ ಪ್ರಕರಣ ಕುರಿತು ಇದೇ ರೀತಿ ತೀರ್ಪು ನೀಡಿ ಎಂದು ಸಂಸತ್ತು ನ್ಯಾಯಾಲಯಕ್ಕ ನಿರ್ದೇಶಿಸುವುದಿಲ್ಲ ಎಂದು ತಿಳಿಸಿದ ಪೀಠ ಅರ್ಜಿ ವಿಲೇವಾರಿ ಮಾಡಿತು.

ನವೆಂಬರ್ 22 ರಂದು ರಾಜಸ್ಥಾನದ ನದ್ಬಾಯಿಯಲ್ಲಿ ಚುನಾವಣಾ ಭಾಷಣ ಮಾಡಿದ್ದ ರಾಹುಲ್ ಅವರು ಪ್ರಧಾನಿ ಹಾಗೂ ಶಾ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ, ಉದ್ಯಮಿ ಗೌತಮ್ ಅದಾನಿ ಜನರ ಜೇಬುಗಳಿಗೆ ಕೈ ಹಾಕುತ್ತಾರೆ. ಜೇಬುಗಳ್ಳರು ಈ ರೀತಿ ಮಾಡುತ್ತಾರೆ ಎಂಬ ಆರೋಪಗಳನ್ನು ಮಾಡಿದ್ದರು ಎಂದು ಅರ್ಜಿದಾರ ಭರತ್‌ ನಗರ್‌ ದೂರಿದ್ದರು.

Related Stories

No stories found.
Kannada Bar & Bench
kannada.barandbench.com