ಸೆರೆಯಲ್ಲಿದ್ದೂ ಕೇಜ್ರಿವಾಲ್‌ ಆದೇಶ: ವಿಚಾರಣಾ ನ್ಯಾಯಾಲಯಕ್ಕೆ ವರದಿ ನೀಡುವಂತೆ ಇ ಡಿಗೆ ದೆಹಲಿ ಹೈಕೋರ್ಟ್ ಸೂಚನೆ

ಇ ಡಿ ವಶದಲ್ಲಿದ್ದಾಗ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನೀರಿನ ಕೊರತೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೇಜ್ರಿವಾಲ್ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿತ್ತು.
ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಹೈಕೋರ್ಟ್
ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಹೈಕೋರ್ಟ್

ಜಾರಿ ನಿರ್ದೇಶನಾಲಯದ (ಇ ಡಿ) ವಶದಲ್ಲಿದ್ದಾಗಲೇ ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ಸರ್ಕಾರಿ ನಿರ್ದೇಶನಗಳನ್ನು ನೀಡಿದ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಇ ಡಿಗೆ ದೆಹಲಿ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.

ಕೇಜ್ರಿವಾಲ್ ಅವರು ಬಂಧನದಲ್ಲಿರುವಾಗ ಸರ್ಕಾರಿ ಆದೇಶ ಹೊರಡಿಸದಂತೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಕೇಜ್ರಿವಾಲ್‌ ಅವರು ನಿಯಮ ಉಲ್ಲಂಘಿಸಿದ್ದರೆ ಅರ್ಜಿದಾರರು ಅದನ್ನು ಇ ಡಿ ಗಮನಕ್ಕೆ ತರಬಹುದು. ಅದು ವಿಚಾರಣಾ ನ್ಯಾಯಾಲಯಕ್ಕೆ ಆ ಕುರಿತು ಮಾಹಿತಿ ನೀಡುತ್ತದೆ ಎಂದು ನ್ಯಾಯಾಲಯ ತಿಳಿಸಿತು.

ತಾನು ರೈತ ಮತ್ತು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿರುವ ಸುರ್ಜಿತ್ ಸಿಂಗ್ ಯಾದವ್ (ಅರ್ಜಿದಾರರು) ಎಂಬುವವರು ಈ ವಿಚಾರವಾಗಿ ಪಿಐಎಲ್ ಸಲ್ಲಿಸಿದ್ದರು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರನ್ನು ಮಾರ್ಚ್ 21ರಂದು ಬಂಧಿಸಲಾಗಿತ್ತು. ಇ ಡಿ ವಶದಲ್ಲಿದ್ದಾಗ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ನೀರಿನ ಕೊರತೆ ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕೇಜ್ರಿವಾಲ್ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿತ್ತು.

ಕೇಜ್ರಿವಾಲ್ ಹೊರಡಿಸಿದ ನಿರ್ದೇಶನಗಳನ್ನು ಗಮನಿಸಿದ್ದ ಇ ಡಿ ಈ ಸರ್ಕಾರಿ ಆದೇಶಗಳು ನ್ಯಾಯಾಲಯ ಆಜ್ಞೆಗೆ ಅನುಗುಣವಾಗಿವೆಯೇ ಎಂಬುದನ್ನು ಅದು ತನಿಖೆ ನಡೆಸಲಿದೆ ಎಂದು ತಿಳಿದುಬಂದಿತ್ತು.

ಕೇಜ್ರಿವಾಲ್ ಅವರು ಜೈಲಿನಲ್ಲಿದ್ದಾಗ ಅವರಿಗೆ ಟೈಪಿಸ್ಟ್, ಕಂಪ್ಯೂಟರ್ ಅಥವಾ ಪ್ರಿಂಟರ್ ನೀಡದಂತೆ ಇ ಡಿಗೆ ನಿರ್ದೇಶನ ನೀಡಬೇಕು ಎಂದು ಯಾದವ್ ಕೋರಿದ್ದರು.

ಕೇಜ್ರಿವಾಲ್ ಅವರು ಹೊರಡಿಸಿದ ಆದೇಶಗಳು ಮತ್ತು ನೀಡುತ್ತಿರುವ ನಿರ್ದೇಶನಗಳನ್ನು ದೆಹಲಿ ಸರ್ಕಾರದ ಸಚಿವೆ ಅತಿಶಿ ಅವರಂತಹವರಿಗೆ ಹೇಗೆ ತಲುಪುತ್ತಿವೆ ಎಂಬುದರ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಅವರು ವಿನಂತಿಸಿದ್ದರು.

ವಿಶೇಷವೆಂದರೆ, ಕೇಜ್ರಿವಾಲ್ ಅವರನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದುಹಾಕುವಂತೆ ಯಾದವ್ ಪ್ರತ್ಯೇಕ ಪಿಐಎಲ್ ಸಲ್ಲಿಸಿದ್ದರು. ಮಾರ್ಚ್ 28ರಂದು ಹೈಕೋರ್ಟ್ ಆ ಮನವಿಯನ್ನು ತಿರಸ್ಕರಿಸಿತ್ತು.

ದೇಶದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಕೇಜ್ರಿವಾಲ್, ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಸಚಿವಾಲಯ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆಯೂ ಕೋರಿ ಯಾದವ್ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಮಾರ್ಚ್‌ 20ರಂದು ಹೈಕೋರ್ಟ್‌ ವಜಾಗೊಳಿಸಿತ್ತು.

Related Stories

No stories found.
Kannada Bar & Bench
kannada.barandbench.com