ಗೂಗಲ್ ಜಾಹೀರಾತು ಕಾರ್ಯಕ್ರಮ ನಿಯಮಾವಳಿ ಭಾರತದಲ್ಲಿ ಕಾನೂನು ಪರಿಹಾರ ಪಡೆಯಲು ಅಥವಾ ಮಧ್ಯಸ್ಥಿಕೆಗೆ ಅರ್ಜಿ ಸಲ್ಲಿಸಲು ಜಾಹೀರಾತುದಾರರನ್ನು ನಿರ್ಬಂಧಿಸುತ್ತದೆಯೇ ಎಂಬ ವಿಚಾರದ ಕುರಿತು ತಾನು ಶೀಘ್ರವೇ ಪರಿಶೀಲಿಸುವುದಾಗಿ ದೆಹಲಿ ಹೈಕೋರ್ಟ್ ಈಚೆಗೆ ಹೇಳಿದೆ.
ಸ್ಟಾರ್ಟ್‌ಅಪ್‌ವಾಲಾ ಎಂಬ ಕಂಪನಿ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಅಮೆರಿಕದಲ್ಲಿ ಪ್ರಧಾನ ಕಚೇರಿ ಹೊಂದಿರುವ ಗೂಗಲ್‌ಗೆ ಪ್ರತಿಕ್ರಿಯೆ ಕೇಳಿ ನೋಟಿಸ್ ನೀಡಿದ್ದಾರೆ.
" ಜಾಹೀರಾತು ಕಾರ್ಯಕ್ರಮಗಳನ್ನು ದೇಶದೊಳಗಿನ ಗೂಗಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಲಕ್ಷಾಂತರ ಗ್ರಾಹಕರು ಪಡೆಯಲಿದ್ದಾರೆ. ಹೀಗಾಗಿ ಅಂತಹ ಷರತ್ತು [ಜಾಹೀರಾತು ನಿಯಮಗಳ ಷರತ್ತು 13] ವಾಸ್ತವವಾಗಿ ಅರ್ಜಿದಾರರ ರೀತಿಯ ಮಂದಿ ಭಾರತದಲ್ಲಿ ಕಾನೂನು ಪರಿಹಾರ ಪಡೆಯುವುದನ್ನು ತಡೆಯುತ್ತದೆಯೇ ಅಥವಾ ಅಂತಹ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ಭಾರತದಲ್ಲಿ ನಡೆಯಬೇಕೇ ಎಂದು ನ್ಯಾಯಾಲಯ ಪರಾಮರ್ಶಿಸಲು ಬಯಸುತ್ತದೆ" ಎಂದು ಪೀಠ ನುಡಿದಿದೆ.
ಡಿಸೆಂಬರ್ 2023 ಮತ್ತು ಜನವರಿ 2024ರಲ್ಲಿ 'ಸೀಮಿತ' ಎಂದು ಅಂಗೀಕೃತವಾದ / ಗುರುತಿಸಲ್ಪಟ್ಟ ಕಂಪನಿಯ ಎಲ್ಲಾ ಡಿಜಿಟಲ್ ಜಾಹೀರಾತುಗಳನ್ನು ಪುನಃಸ್ಥಾಪಿಸುವ ಮೂಲಕ ಯಥಾಸ್ಥಿತಿ ಕಾಪಾಡಿಕೊಳ್ಳಲು ಗೂಗಲ್ ಇಂಡಿಯಾಕ್ಕೆ ನಿರ್ದೇಶನ ನೀಡುವಂತೆ ಕೋರಿ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆ- 1996 ರ ಸೆಕ್ಷನ್ 9ರ ಅಡಿಯಲ್ಲಿ ಸ್ಟಾರ್ಟ್ಅಪ್‌ವಾಲಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
'ನೀತಿಯಿಂದ ಸೀಮಿತ' ಎಂದು ಗುರುತಿಸಲಾದ ಯಾವುದೇ ಉಳಿದ ಜಾಹೀರಾತುಗಳನ್ನು ನಿರಾಕರಿಸದಂತೆ ಗೂಗಲ್‌ಗೆ ನಿರ್ಬಂಧ ವಿಧಿಸಲು ಅದು ಕೋರಿತ್ತು.
ತಾನು ಬಿಡುಗಡೆ ಮಾಡಿದ ಕೆಲವು ಜಾಹೀರಾತುಗಳನ್ನು 'ಸರ್ಕಾರಿ ದಾಖಲೆಗಳು ಮತ್ತು ಅಧಿಕೃತ ಸೇವೆಗಳು' ಎಂಬ ನೀತಿ ಉಲ್ಲೇಖಿಸಿ ಗೂಗಲ್ ಜಾಹೀರಾತು ಕಾರ್ಯಕ್ರಮ ತಿರಸ್ಕರಿಸುತ್ತಿದೆ ಎಂದು ಸ್ಟಾರ್ಟ್‌ಅಪ್‌ವಾಲಾ ಹೇಳಿತ್ತು.
ಜಾಹೀರಾತು ನಿಯಮಗಳ ಕಲಂ 13 ಮಧ್ಯಸ್ಥಿಕೆ ಷರತ್ತು ಪಕ್ಷಕಾರರ ನಡುವಿನ ವ್ಯಾಜ್ಯಗಳನ್ನು ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯಲ್ಲಿ ನಡೆಸುವ ಮಧ್ಯಸ್ಥಿಕೆಯಿಂದ ಪರಿಹರಿಸಲಾಗುವುದು ಎಂದು ಹೇಳುತ್ತದೆ. ಇದು ಜಾಹೀರಾತು ನಿಯಮಗಳಲ್ಲಿನ ಪ್ರಮಾಣಿತ ಮಧ್ಯಸ್ಥಿಕೆ ಷರತ್ತಾಗಿದ್ದು, ನಮ್ಮ ಕಾನೂನು ಪರಿಹಾರ ಪರಿಣಾಮಕಾರಿಯಾಗಿ ಬಳಸುವುದನ್ನು ತಡೆಯುತ್ತದೆ ಎಂದು ಸ್ಟಾರ್ಟ್ಅಪ್‌ವಾಲಾ ವಾದಿಸಿತ್ತು.
ಇತ್ತ ಗೂಗಲ್ ಪ್ರಾದೇಶಿಕ ನ್ಯಾಯವ್ಯಾಪ್ತಿ ಮತ್ತು ನಿರ್ವಹಣೆಯ ವಿಚಾರವನ್ನು ಎತ್ತಿತು. ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತ ಪ್ರತಿಕ್ರಿಯೆ ಸಲ್ಲಿಸಲು ಗೂಗಲ್ ಪರ ವಕೀಲರು ಸಮಯಾವಕಾಶ ಕೋರಿದರು. ವಾದ ಆಲಿಸಿದ ನ್ಯಾ. ಸಿಂಗ್ ಅವರು ಎರಡು ವಾರಗಳಲ್ಲಿ ಉತ್ತರ ಸಲ್ಲಿಸುವಂತೆ ಗೂಗಲ್‌ಗೆ ನಿರ್ದೇಶನ ನೀಡಿದರು.
[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]