ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರನ್ನು ದೆಹಲಿ ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ದೆಹಲಿ ಪೊಲೀಸರು ಮತ್ತು ಕುಮಾರ್ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶ ಗೌರವ್ ಗೋಯಲ್ ಅವರು ಶನಿವಾರ ತಡರಾತ್ರಿ ಈ ಆದೇಶ ಪ್ರಕಟಿಸಿದರು.
ದೆಹಲಿ ಪೊಲೀಸರ ಪರವಾಗಿ ಹಾಜರಾದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಬಿಭವ್ ಅವರನ್ನು 7 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸುವಂತೆ ಕೋರಿದರು.
ವಾದಕ್ಕೆ ಆಕ್ಷೇಪಿಸಿದ ಬಿಭವ್ ಪರ ವಕೀಲರಾದ ರಾಜೀವ್ ಮೋಹನ್ ಮತ್ತು ಶದನ್ ಫರಾಸತ್ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರಿಂದ ತರಾತುರಿಯಲ್ಲಿ ಬಂಧಿಸಲಾಗಿದೆ ಎಂದರು.
ಬಿಭವ್ ಅವರನ್ನು ಶನಿವಾರ ಮುಂಜಾನೆ ದೆಹಲಿ ಪೊಲೀಸರು ಬಂಧಿಸಿದ್ದರು. ಅವರ ಬಂಧನದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ನಿರುಪಯುಕ್ತವಾಯಿತು.
ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಬಿಭವ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ವಾತಿ ಮಲಿವಾಲ್ ಆರೋಪಿಸಿದ್ದರು. ಈ ಆರೋಪಗಳನ್ನು ಎಎಪಿ ಮತ್ತು ಬಿಭವ್ ನಿರಾಕರಿಸಿದ್ದರು.
ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವಂತೆ ಮಾಲೀವಾಲ್ ಅವರ ಎದೆ, ಹೊಟ್ಟೆ ಮತ್ತು ಸೊಂಟದ ಭಾಗಕ್ಕೆ ಬಿಭವ್ ಕಾಲಿನಿಂದ ಒದ್ದಿದ್ದಾರೆ.
ಆದರೆ ಎಎಪಿ ಈ ಆರೋಪಗಳನ್ನು ನಿರಾಕರಿಸಿದ್ದು ಪ್ರತ್ಯಾರೋಪ ಮಾಡಿದೆ. ಮಾಲಿವಾಲ್ ಅವರು ಮುಖ್ಯಮಂತ್ರಿ ನಿವಾಸದಿಂದ ಹೊರನಡೆಯುತ್ತಿರುವಾಗ ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸುತ್ತಿರುವುದನ್ನು ತೋರಿಸುವ ಕೆಲವು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ.