ದಾಂಪತ್ಯ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂಬ ಕಾರಣಕ್ಕೆ ಕೌಟುಂಬಿಕ ನ್ಯಾಯಾಲಯಗಳು ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ [ʼಡಿʼ ಮತ್ತು ʼಎʼ ನಡುವಣ ಪ್ರಕರಣ].
ಹಿಂದೂ ಪಕ್ಷಕಾರರನ್ನು ಒಳಗೊಂಡ ಪ್ರಕರಣಗಳ ವಿಚಾರಣೆ ನಡೆಸುವಾಗ, ಹಿಂದೂ ವಿವಾಹ ಕಾಯಿದೆಯಡಿ ವಿಚ್ಛೇದನ ನೀಡುವ ನಿಬಂಧನೆಗಳಿಗೆ ಅನುಗುಣವಾಗಿ ಕೌಟುಂಬಿಕ ನ್ಯಾಯಾಲಯ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಪೀಠ ಹೇಳಿದೆ.
ಹಿಂದೂ ವಿವಾಹ ಕಾಯಿದೆಯಡಿ ವಿವಾಹ ಮುರಿದು ಬಿದ್ದಿದೆ ಎಂದು ಕೌಟುಂಬಿಕ ನ್ಯಾಯಾಲಯಗಳು ವಿಚ್ಛೇದನ ನೀಡುವಂತಿಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಸಂಜೀವ್ ಸಚ್‌ದೇವ ಮತ್ತು ವಿಕಾಸ್ ಮಹಾಜನ್ ಅವರಿದ್ದ ವಿಭಾಗೀಯ ಪೀಠ ಈ ಆಧಾರದಲ್ಲಿ ವಿಚ್ಚೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬೇರೆ ಕಾರಣಗಳ ಜೊತೆಗೆ ಬದಿಗೆ ಸರಿಸಿದೆ.
ಸಂವಿಧಾನದ 142ನೇ ವಿಧಿ ಪ್ರಕಾರ ಸರಿಪಡಿಸಲಾಗದಷ್ಟು ವಿವಾಹ ಮುರಿದು ಬಿದ್ದಿದೆ ಎಂಬ ಆಧಾರದ ಮೇಲೆ ವಿಚ್ಛೇದನ ನೀಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಮಾತ್ರ ಚಲಾಯಿಸಬಹುದು. ಅಂತಹ ಅಧಿಕಾರ ಕೌಟುಂಬಿಕ ನ್ಯಾಯಾಲಯಗಳಿಗಿರಲಿ ಹೈಕೋರ್ಟ್‌ಗಳಿಗೂ ಇಲ್ಲ ಎಂದು ನ್ಯಾಯಾಲಯ ವಿವರಿಸಿದೆ.
ದೈಹಿಕ ಸಂಪರ್ಕ ನಿರಾಕರಿಸುವ ಮೂಲಕ ಕ್ರೌರ್ಯ ಎಸಗಲಾಗಿದೆ ಹಾಗೂ ತನ್ನನ್ನು ತೊರೆಯಲಾಗಿದೆ ಎಂಬ ಆಧಾರದ ಮೇಲೆ ಗಂಡ ಸಲ್ಲಿಸಿದ್ದ ಮನವಿ ಪುರಸ್ಕರಿಸಿ ಕೌಟುಂಬಿಕ ನ್ಯಾಯಾಲಯ 2018ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಹೈಕೋರ್ಟ್ ಈ ವಿಚಾರ ತಿಳಿಸಿದೆ. ದಂಪತಿಯು 2002ರಲ್ಲಿ ಮದುವೆಯಾಗಿದ್ದು, ಅವರಿಗೆ 2007ರಲ್ಲಿ ಪುತ್ರಿಯ ಜನನವಾಗಿತ್ತು. ತದನಂತರ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ದಂಪತಿ ಹೀಗೆ ಪ್ರತ್ಯೇಕವಾಗಿ ಹನ್ನೊಂದು ವರ್ಷಗಳಿಂದ ವಾಸಿಸುತ್ತಿರುವುದನ್ನು ಪರಿಗಣಿಸಿ ಕೌಟುಂಬಿಕ ನ್ಯಾಯಾಲಯವು ಮದುವೆಯು ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂದು ವಿಚ್ಛೇದನ ನೀಡಿತ್ತು. ಇದನ್ನು ಪತ್ನಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]