

ಕನ್ನಡದ ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ʼಒಮ್ಮೆ ನಿನ್ನನ್ನುʼ, ʼನ್ಯಾಯ ಎಲ್ಲಿದೆʼ ಎಂಬ ಹಾಡುಗಳ ತುಣುಕುಗಳನ್ನು ಅನುಮತಿ ಪಡೆಯದೇ ಬಳಕೆ ಮಾಡಿರುವುದಕ್ಕೆ ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಮತ್ತು ಅವರ ಒಡೆತನದ ಪರಂವಾ ಸ್ಟುಡಿಯೊಗೆ ದೆಹಲಿ ಹೈಕೋರ್ಟ್ ಈಚೆಗೆ ₹25 ಲಕ್ಷ ದಂಡ ವಿಧಿಸಿದೆ.
ಪರಂವಾ ಸ್ಟುಡಿಯೊ ಮತ್ತು ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಮ್ಯಾಸಿಕ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
“ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ನ್ಯಾಯಾಲಯದ ನಿರ್ದೇಶನಕ್ಕೆ ಉದ್ದೇಶಪೂರ್ವಕವಾಗಿ ಪರಂವಾ ಸ್ಟುಡಿಯೊ ಅವಿಧೇಯತೆ ತೋರಿದೆ” ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಅಲ್ಲದೇ, ಅಗತ್ಯ ಪರವಾನಗಿ ಪಡೆಯಲು ಹಾಡಿನ ಬಳಕೆಯು ಅತ್ಯಂತ ಕಡಿಮೆ ಇತ್ತು ಎಂಬ ರಕ್ಷಿತ್ ಶೆಟ್ಟಿ ಅವರ ವಾದವನ್ನು ನ್ಯಾಯಾಲಯ ತಿರಸ್ಕರಿಸಿದೆ.
“ನ್ಯಾಯ ಎಲ್ಲಿದೆʼ ಹಾಡನ್ನು ಬ್ಯಾಚುಲರ್ ಪಾರ್ಟಿ ಸಿನಿಮಾದ ಸಂಕಥನಕ್ಕೆ ಪೂರಕವಾಗಿ ಬಳಕೆ ಮಾಡಿಲಾಗಿದೆ. ಇದು ಆಕಸ್ಮಿಕವಲ್ಲ, ಬದಲಿಗೆ ಬ್ಯಾಚುಲರ್ ಪಾರ್ಟಿ ಸಿನಿಮಾದ ವಿಸ್ತರಣೆಗಾಗಿ ಮಾಡಲಾದ ಪ್ರಜ್ಞಾಪೂರ್ವಕ ಸೃಜನಾತ್ಮಕ ನಿರ್ಧಾರವಾಗಿದೆ” ಎಂದು ದೆಹಲಿ ಹೈಕೋರ್ಟ್ ಹೇಳಿದೆ.
“ರಕ್ಷಿತ್ ಶೆಟ್ಟಿ ಮತ್ತು ಪರಂವಾ ಸ್ಟುಡಿಯೊ ಈ ಹಿಂದೆ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿರುವ ₹20 ಲಕ್ಷವನ್ನು ಎಂಆರ್‌ಟಿ ಮ್ಯೂಸಿಕ್‌ಗೆ ಬಿಡುಗಡೆ ಮಾಡಬೇಕು. ಠೇವಣಿಯನ್ನು ನಿರ್ದಿಷ್ಟ ಕಾಲಮಿತಿಯಲ್ಲಿ ನ್ಯಾಯಾಲಯದಲ್ಲಿ ಠೇವಣಿ ಇಡಬೇಕು ಎಂಬ ನಿರ್ದೇಶನ ಪಾಲಿಸದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ₹5 ಲಕ್ಷ ದಂಡ ವಿಧಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ʼಒಮ್ಮೆ ನಿನ್ನನ್ನುʼ ಹಾಡನ್ನು 31 ಸೆಕೆಂಡ್ ಬಳಕೆ ಮಾಡಲಾಗಿದೆ. ʼನ್ಯಾಯ ಎಲ್ಲಿದೆʼ ಹಾಡನ್ನು 7 ಸೆಕೆಂಡ್ ಬಳಕೆ ಮಾಡಲಾಗಿದೆ. ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್ 14(d)(i)(A) ರ ಅಡಿ ಸಿನಿಮಾದ ಒಂದೇ ಒಂದು ಚಿತ್ರವೂ ಸಹ ಹಕ್ಕುಸ್ವಾಮ್ಯ ಮಾಲೀಕರ ವಿಶೇಷ ಹಕ್ಕಾಗಿದೆ. ಹೀಗಾಗಿ, ಒಂದೇ ಒಂದು ಚಿತ್ರ ಅಥವಾ ನ್ಯಾಯ ಎಲ್ಲಿದೆ ಹಾಡಿನ ಆಡಿಯೊ-ದೃಶ್ಯವನ್ನು ಫಿರ್ಯಾದಿಯದ ಅನುಮತಿ ಇಲ್ಲದೇ ರಕ್ಷಿತ್ ಶೆಟ್ಟಿ ಅವರು ಬಳಸಬಾರದಿತ್ತು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಲ್ಲದೇ, ತನ್ನ ಆದೇಶ ಉಲ್ಲಂಘಿಸಿದ್ದಕ್ಕಾಗಿ ರಕ್ಷಿತ್ ಶೆಟ್ಟಿ ಅವರನ್ನು ಜೈಲಿಗೆ ಕಳುಹಿಸುವುದರಿಂದ ಹಿಂದೆ ಸರಿದಿರುವ ನ್ಯಾಯಾಲಯವು ಪರಂವಾ ಮತ್ತು ರಕ್ಷಿತ್ ಶೆಟ್ಟಿ ಅವರಿಗೆ ₹5 ಲಕ್ಷ ದಂಡ ವಿಧಿಸಿದೆ.
“ತಮ್ಮ ನಡೆಗೆ ವಿಷಾದಿಸಿ 31.10.2025ರಂದು ಪರಂವಾ ಸ್ಟುಡಿಯೊ ಮತ್ತು ರಕ್ಷಿತ್ ಶೆಟ್ಟಿ ಸಲ್ಲಿಸಿರುವ ಅಫಿಡವಿಟ್ ಪರಿಗಣಿಸಿ, ಅವರಿಗೆ ವಿನಾಯಿತಿ ನೀಡಿದೆ. 12.08.2024ರ ತನ್ನ ಆದೇಶ ಉಲ್ಲಂಘಿಸಿದ್ದಕ್ಕೆ ರಕ್ಷಿತ್ ಶೆಟ್ಟಿ ಅವರಿಗೆ ಜೈಲು ಶಿಕ್ಷೆ ವಿಧಿಸುವುದಕ್ಕೆ ಬದಲಾಗಿ ₹5 ಲಕ್ಷ ದಂಡವನ್ನು ಎರಡು ವಾರಗಳಲ್ಲಿ ಫಿರ್ಯಾದಿಗೆ ಪಾವತಿಸಬೇಕು” ಎಂದು ನಿರ್ದೇಶಿಸಿದೆ.
ʼಒಮ್ಮೆ ನಿನ್ನನ್ನುʼ, ʼನ್ಯಾಯ ಎಲ್ಲಿದೆʼ ಎಂಬ ಎರಡು ಹಾಡುಗಳ ಸೌಂಡ್ ರೆಕಾರ್ಡಿಂಗ್, ಸಾಹಿತ್ಯ ಮತ್ತು ಸಂಗೀತವು ತನ್ನ ಮಾಲೀಕತ್ವಕ್ಕೆ 2020ರ ಪತ್ರದ ಮೂಲಕ ಸೇರಿದೆ ಎಂದು ಎಂಆರ್‌ಟಿ ಮ್ಯೂಸಿಕ್ ವಾದಿಸಿದ್ದು, ಪರವಾನಗಿ ಪಡೆಯದೇ ಎರಡೂ ಹಾಡುಗಳನ್ನು ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಬಳಕೆ ಮಾಡಲಾಗಿದೆ. ಒಂದು ಹಾಡನ್ನು ಟಿವಿ ದೃಶ್ಯದಲ್ಲಿ ಬಳಕೆ ಮಾಡಲಾಗಿದೆ. ಇನ್ನೊಂದನ್ನು ತರಗತಿ ಸನ್ನಿವೇಶಕ್ಕೆ ಅನುಗುಣವಾಗಿ ಬಳಕೆ ಮಾಡಲಾಗಿದೆ ಎಂದು ಹೇಳಿತ್ತು. 2024ರ ಜನವರಿ ಬ್ಯಾಚುಲರ್ ಪಾರ್ಟಿ ಸಿನಿಮಾ ತೆರೆ ಕಂಡಿದ್ದು, ಆನಂತರ ಓಟೊಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು.
ಹಕ್ಕುಸ್ವಾಮ್ಯ ಉಲ್ಲಂಘಿಸಿರುವ ವಿಷಯವನ್ನು ತೆಗೆಯುವುದರ ಜೊತೆಗೆ ಒಂದು ತಿಂಗಳಲ್ಲಿ ₹20 ಲಕ್ಷ ಠೇವಣಿ ಇಡುವಂತೆ ರಕ್ಷಿತ್ ಶೆಟ್ಟಿಗೆ 2024ರ ಆಗಸ್ಟ್ 12ರಂದು ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಇದನ್ನು ರಕ್ಷಿತ್ ಶೆಟ್ಟಿ ಪಾಲಿಸದೇ ಇರುವುದರಿಂದ ಎಂಆರ್‌ಟಿ ಮ್ಯೂಸಿಕ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಇದಾದ ನಂತರ ರಕ್ಷಿತ್ ಶೆಟ್ಟಿ ಅವರು ಪ್ರಕರಣದ ವಿಚಾರಣಾ ಹಂತದಲ್ಲಿ ₹20 ಲಕ್ಷ ಠೇವಣಿ ಇಟ್ಟಿದ್ದರು. ನ್ಯಾಯಾಲಯದ ಆದೇಶವನ್ನು ನಿರ್ದೇಶಿತ ಅವಧಿಯಲ್ಲಿ ಪಾಲಿಸದೇ ಇರುವುದರಿಂದ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿತ್ತು.