ವಿಕಿಪೀಡಿಯ ಮಾದರಿ 'ಅಪಾಯಕಾರಿ' ಎಂದ ದೆಹಲಿ ಹೈಕೋರ್ಟ್‌

ವಿಕಿಪೀಡಿಯಾ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ. ತನ್ನ ಕುರಿತಾದ ಪುಟದಲ್ಲಿ ಮಾನಹಾನಿಕರ ಮಾಹಿತಿ ಹಂಚಿಕೊಳ್ಳಲಾಗಿದೆ, ತನ್ನನ್ನು ಆಡಳಿತದಲ್ಲಿರುವ ಸರ್ಕಾರದ "ಪ್ರಚಾರ ಸಾಧನ," "ಮುಖವಾಣಿ" ಎಂದು ಕರೆದಿರುವುದಾಗಿ ಆಕ್ಷೇಪಿಸಿದೆ.
ANI, WIKIPEDIA
ANI, WIKIPEDIA
Published on

ವಿಕಿಪೀಡಿಯಾ ಒಂದು ವೇದಿಕೆಯಾಗಿ "ಅಪಾಯಕಾರಿಯಾಗಿ" ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿಯೂ ವಿಶೇಷವಾಗಿ, ಹೇಗೆ ಯಾರು ಬೇಕಾದರೂ ಅದರ ಪುಟಗಳನ್ನು ತಿದ್ದಬಹುದು, ಸಂಪಾದಿಸಬಹುದು ಎನ್ನುವುದನ್ನು ಗಮನಿಸಿದರೆ ಈ ಅಂಶ ತಿಳಿಯುತ್ತದೆ ಎಂದು ದೆಹಲಿ ಹೈಕೋರ್ಟ್‌ ಶುಕ್ರವಾರ ಆತಂಕ ವ್ಯಕ್ತಪಡಿಸಿದೆ.

ವಿಕಿಪೀಡಿಯಾ ಆನ್‌ಲೈನ್ ವಿಶ್ವಕೋಶದ ವಿರುದ್ಧ ಏಷ್ಯನ್ ನ್ಯೂಸ್ ಇಂಟರ್‌ನ್ಯಾಶನಲ್ (ANI) ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ವಿಕಿಪೀಡಿಯಾದ ಕಾರ್ಯವೈಖರಿ ತಿಳಿದುಕೊಂಡ ನಂತರ ನ್ಯಾಯಮೂರ್ತಿ ಸುಬ್ರಮೊಣಿಯಂ ಪ್ರಸಾದ್ ಅವರು ಮೇಲಿನಂತೆ ಆತಂಕ ವ್ಯಕ್ತಪಡಿಸಿದರು.

"ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಪುಟವನ್ನು ತಿದ್ದುಪಡಿ ಮಾಡಬಹುದೇ?" ಯಾರು ಬೇಕಾದರೂ ತಿದ್ದುಪಡಿ ಮಾಡಲು ಅವಕಾಶವಿದ್ದರೆ ಇದಾವ ರೀತಿಯ ಪುಟವಾಗಿದೆ?" ಎಂದು ನ್ಯಾಯಾಲಯ ಆಶ್ಚರ್ಯದಿಂದ ಕೇಳಿತು.

ಇದು ನನ್ನ ಹೆಸರು (ಹೆಸರಿನ ಪುಟ) ಎಂದು ಭಾವಿಸಿ. ಯಾರು ಬೇಕಾದರೂ ನನ್ನ ಕುರಿತಾದ ಪುಟದಲ್ಲಿ ನನ್ನನ್ನು ನಿಂದಿಸಬಹುದು ಅಥವಾ ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಬಹುದು. ಯಾವುದೋ ತಪ್ಪು ಹೇಳಿಕೆಗಳನ್ನು ನನ್ನದೆಂದು ಆರೋಪಿಸಬಹುದು...

ನ್ಯಾ. ಸುಬ್ರಮೊಣಿಯಂ ಪ್ರಸಾದ್‌

"ಇದು ನನ್ನ ಹೆಸರು (ಹೆಸರಿನ ಪುಟ) ಎಂದು ಭಾವಿಸಿ, ಯಾರು ಬೇಕಾದರೂ ನನ್ನ ಪುಟದಲ್ಲಿ ನನ್ನನ್ನು ನಿಂದಿಸಬಹುದು ಅಥವಾ ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ನೀಡಬಹುದು. ಯಾವುದೋ ತಪ್ಪು ಹೇಳಿಕೆಗಳನ್ನು ನನ್ನದೆಂದು ಆರೋಪಿಸಬಹುದಲ್ಲವೇ?" ಎಂದು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ವಿಚಾರಣೆ ವೇಳೆ ಆತಂಕ ವ್ಯಕ್ತಪಡಿಸಿದರು.

ಆಗ ಇದಕ್ಕೆ ಸಮಜಾಯಿಷಿ ನೀಡಲು ಪ್ರಯತ್ನಿಸಿದ ವಿಕಿಪೀಡಿಯಾದ ಹಿರಿಯ ವಕೀಲ ಜಯಂತ್ ಮೆಹ್ತಾ, ಹೀಗೆ ಪುಟವನ್ನು ಸೃಜಿಸುವಾಗ ಅಥವಾ ಮಾಹಿತಿಯನ್ನು ನವೀಕರಿಸುವಾಗ ಬಳಕೆದಾರರು ವಿಕಿಪೀಡಿಯಾದ ನೀತಿ, ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಇದರಿಂದ ತೃಪ್ತರಾಗದ ನ್ಯಾ. ಸುಬ್ರಮೊಣಿಯಂ ಪ್ರಸಾದ್‌ "ಇದು ಅಪಾಯಕಾರಿ" ಎಂದು ಉದ್ಗರಿಸಿದರು.

ಈ ಸಂದರ್ಭದಲ್ಲಿ, ನ್ಯಾಯಾಲಯಕ್ಕೆ ಮತ್ತಷ್ಟು ಮಾಹಿತಿ ನೀಡಲು ಮುಂದಾದ ಮೆಹ್ತಾ, "ಮೊದಲಿನಿಂದ ಪ್ರಾರಂಭಿಸೋಣ. ಇದು ಫೇಸ್‌ಬುಕ್‌ನಂತಲ್ಲ. ಇದು ಯಾರು, ಏನು ಬೇಕಾದರೂ ಮಾಡಬಹುದಾದ ಸಾಮಾಜಿಕ ಮಾಧ್ಯಮವಲ್ಲ. ಇದು ಅರ್ಹ ಮಾಹಿತಿಯನ್ನು ಯಾವುದೇ ಬಳಕೆದಾರ ಸೇರಿಸಬಹುದಾದ ವಿಶ್ವಕೋಶವಾಗಿದೆ. ಪುಟವು ಸಂಪಾದನೆಗೆ ಮುಕ್ತವಾಗಿದೆ, ಆ ಮೂಲಕ ಅದು ವಿಶ್ವಾಸಾರ್ಹತೆಯನ್ನು ಗಳಿಸುತ್ತದೆ. ಇದರಲ್ಲಿ ದಾಖಲಿಸುವ ಎಲ್ಲ ಮಾಹಿತಿಯ ಮೂಲಾಧಾರವನ್ನು ಉಲ್ಲೇಖಿಸಬೇಕಾಗುತ್ತದೆ," ಎಂದರು.

ಆದರೆ, ನ್ಯಾಯಾಲಯ ಈ ವಿವರಣೆಯಿಂದ ತೃಪ್ತವಾದಂತೆ ತೋರಲಿಲ್ಲ. ಯಾವುದೇ ವ್ಯಕ್ತಿ, ಸಂಸ್ಥೆ ತನ್ನ ಹೆಸರಿನ ಮಾಹಿತಿ ಪುಟವನ್ನು ತಿರಸ್ಕರಿಸಲು ಇಲ್ಲಿ ಸಾಧ್ಯವಿದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ದನಿಗೂಡಿಸಿದ ಎಎನ್‌ಐ ಪರ ವಕೀಲರು, ಈ ಪ್ರಶ್ನೆಯನ್ನು ತಾವು ಸಹ ದಾವೆಯಲ್ಲಿ ಎತ್ತಿರುವುದಾಗಿ ತಿಳಿಸಿದರು.

ಆದರೆ, ಇದಕ್ಕೆ ವಿಕಿಪೀಡಿಯಾವು ತನ್ನನ್ನು ಸಾಮಾಜಿಕ ಮಾಧ್ಯಮಗಳಿಂದ ಭಿನ್ನವಾಗಿ ಪರಿಗಣಿಸಬೇಕಾಗುತ್ತದೆ ಎಂದಿತು.

ಈ ವೇಳೆ ಎಎನ್‌ಐ ತನ್ನ ಹೆಸರಿನ ಮಾಹಿತಿ ಪುಟದಲ್ಲಿ ನಿರಂತರವಾಗಿ ನಿಂದನೀಯ ಮಾಹಿತಿಯನ್ನು ಸೇರ್ಪಡಿಸಲಾಗುತ್ತಿದೆ ಎಂದು ಆಕ್ಷೇಪಿಸಿತು.

ಇದಕ್ಕೆ ಉತ್ತರಿಸಿದ ಮೆಹ್ತಾ, "ಎಎನ್‌ಐ ಬಗ್ಗೆ ವಿಕಿಪೀಡಿಯಾದಲ್ಲಿ ಉಲ್ಲೇಖಿಸಲಾಗಿರುವ ಮಾಹಿತಿಯು ಅಂತರ್ಜಾಲದಲ್ಲಿ ಸುದೀರ್ಘ ಕಾಲದಿಂದಲೂ ಇರುವಂಥದ್ದಾಗಿದೆ. ನನ್ನ ಸ್ನೇಹಿತ ಹೇಳುತ್ತಿರುವಷ್ಟು ಸರಳವಾಗಿ ಈ ವಿಷಯವಿಲ್ಲ," ಎಂದರು.

ಹಿನ್ನೆಲೆ: ವಿಕಿಪೀಡಿಯಾ ವಿರುದ್ಧ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿದೆ. ಸುದ್ದಿ ಸಂಸ್ಥೆಯ ಪ್ರಕಾರ, ವಿಕಿಪೀಡಿಯಾ ತನ್ನ ಪುಟದಲ್ಲಿ ಮಾನಹಾನಿಕರ ಮಾಹಿತಿಗಳನ್ನು ಹಂಚಿಕೊಳ್ಳಲು ಅನುಮತಿಸಿದೆ. ಈ ಹಿಂದೆ ಎಎನ್‌ಐ ಅನ್ನು ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರದ "ಪ್ರಚಾರ ಸಾಧನ," "ಮುಖವಾಣಿ" ಎಂದು ವಿಕಿಪೀಡಿಯಾದಲ್ಲಿ ಉಲ್ಲೇಖಿಸಸಲಾಗಿತ್ತು ಎಂದು ಆಕ್ಷೇಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ವಿಕಿಪೀಡಿಯಾಕ್ಕೆ ಸಮನ್ಸ್ ಜಾರಿ ಮಾಡಿತ್ತು. ಅಲ್ಲದೆ, ಎಎನ್‌ಐ ಕುರಿತಾದ ವಿಕಿಪೀಡಿಯಾ ಪುಟದಲ್ಲಿ ಸಂಪಾದನೆ ಮಾಡಿದ ಮೂವರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸುವಂತೆ ಆದೇಶಿಸಿತ್ತು. ಆದರೆ, ವಿಕಿಮೀಡಿಯಾ ಫೌಂಡೇಶನ್ ಹೆಸರು ಬಹಿರಂಗಪಡಿಸುವಿಕೆಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಇದು ವಿಭಾಗೀಯ ಪೀಠದ ಮುಂದೆ ಬಾಕಿ ಉಳಿದಿದೆ. ಈ ಮಧ್ಯೆ, ಎಎನ್‌ಐ ತನ್ನ ಹೆಸರಿನ ಪುಟವನ್ನು ತೆಗೆದುಹಾಕಲು ತನ್ನ ಅರ್ಜಿಯನ್ನು ಒತ್ತಾಯಿಸುತ್ತಿದೆ. ಈ ಕುರಿತು ಇಂದು ನ್ಯಾ. ಸುಬ್ರಮೊಣಿಯಂ ಪ್ರಸಾದ್ ಅವರ ಪೀಠ ವಿಚಾರಣೆ ನಡೆಸಿತು.

Kannada Bar & Bench
kannada.barandbench.com