ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಭೇಟಿಯಾದ ಮಹಿಳೆಯನ್ನು ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ದೆಹಲಿ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ.
ಆರೋಪಿ ಮತ್ತು ದೂರುದಾರ-ಮಹಿಳೆ ವೈವಾಹಿಕ ಆ್ಯಪ್‌ನಲ್ಲಿ ಭೇಟಿಯಾಗದೆ ಡೇಟಿಂಗ್ ಆ್ಯಪ್ ಮೂಲಕ ಸಂಧಿಸಿದ್ದು ಅವರ ನಡುವೆ ವಿನಿಮಯವಾದ ಪಠ್ಯ ಸಂದೇಶಗಳು ಅವರು ಮದುವೆಯ ಕುರಿತು ಪ್ರಸ್ತಾಪಿಸಿದ್ದರು ಎಂಬುದನ್ನು ಹೇಳುವುದಿಲ್ಲ ಎಂದು ತಿಳಿಸಿದ ನ್ಯಾ. ವಿಕಾಸ್ ಮಹಾಜನ್ ಆರೋಪಿಗೆ ಜಾಮೀನು ನೀಡಿದರು.
"ದೂರುದಾರರು ಮತ್ತು ಅರ್ಜಿದಾರರು ಡೇಟಿಂಗ್ ಅಪ್ಲಿಕೇಶನ್ "ಹಿಂಜ್" ನಲ್ಲಿ ಭೇಟಿಯಾಗಿದ್ದು ವೈವಾಹಿಕ ಅಪ್ಲಿಕೇಶನ್ನಲ್ಲಿ ಅಲ್ಲ ಎಂಬ ಬಗ್ಗೆ ಸಂದೇಹಗಳಿಲ್ಲ. ಅವರ ನಡುವೆ ಸಾಕಷ್ಟು ವಾಟ್ಸಾಪ್ ಸಂದೇಶಗಳ ವಿನಿಮಯ ನಡೆದಿದ್ದು ಆ ಯಾವುದೇ ಸಂದೇಶಗಳಲ್ಲಿ ಅರ್ಜಿದಾರರಿಂದ ವಿವಾಹದ ಪ್ರಸ್ತಾಪವಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ತಮ್ಮ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ತಿಳಿದ ನಂತರವೂ, ಆಕೆ ನಾಲ್ಕು ದಿನಗಳ ಕಾಲ ಏರ್‌ಬಿಎನ್‌ಬಿ ಜಾಲತಾಣದ ಮೂಲಕ ಆತನೊಂದಿಗೆ ವಾಸ್ತವ್ಯ ಹೂಡಿ ಪದೇ ಪದೇ ಲೈಂಗಿಕ ಸಂಪರ್ಕ ಹೊಂದಿರುವ ಬಗ್ಗೆ ಆಕೆ ಹೇಳಿಕೊಂಡಿದ್ದಾರೆ ಎನ್ನುವ ಅಂಶವನ್ನು ನ್ಯಾಯಾಲಯ ಗಮನಿಸಿತು.
ಸಮ್ಮತಿಯೊಂದಿಗೇ ಮಹಿಳೆಯ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಪಡೆದಿರುವುದನ್ನು ಪಾಟಿ ಸವಾಲಿನ ವೇಳೆ ಆಕೆ ಒಪ್ಪಿಕೊಂಡಿದ್ದಾರೆ. ಈ ವಾಸ್ತವಾಂಶಗಳ ಹಿನ್ನೆಲೆಯಲ್ಲಿ ಪರಸ್ಪರ ಒಮ್ಮತದಿಂದ ಲೈಂಗಿಕ ಕ್ರಿಯೆ ನಡೆದಿದ್ದು ಮದುವೆ ಬಗ್ಗೆ ಯಾವುದೇ ಸುಳ್ಳು ಭರವಸೆ ಮತ್ತು ತಪ್ಪು ಕಲ್ಪನೆಗಳನ್ನು ನೀಡಿ ಸಂಭೋಗಕ್ಕೆ ಒಪ್ಪಿಗೆ ಪಡೆದಂತೆ ತೋರುತ್ತಿಲ್ಲ ಎಂದು ನ್ಯಾ. ಮಹಾಜನ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 376 ಮತ್ತು 420ರ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಐಐಟಿ ಖರಗ್‌ಪುರದಿಂದ ಎಂಜಿನಿಯರಿಂಗ್ ಪದವಿ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಿಂದ ಎರಡು ಸ್ನಾತಕೋತ್ತರ ಪದವಿ. ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಪಿಎಚ್‌ಡಿ ಪದವಿ ಪಡೆದಿರುವುದಾಗಿ ಅರ್ಜಿದಾರ ಮೊದಲಿಗೆ ಹೇಳಿಕೊಂಡಿದ್ದ. ಆದರೆ ಆತ ಕೇವಲ ಬಿಎಸ್‌ಸಿ ಪದವಿಧರ ಎಂದು ತಿಳಿದುಬಂದಿತ್ತು. ಅರ್ಜಿದಾರನ ವೈದ್ಯಕೀಯ ಚಿಕಿತ್ಸೆಗಾಗಿ ಸುಮಾರು 1.2 ಕೋಟಿ ರೂಪಾಯಿ ನೀಡಿದ್ದೇನೆ ಎಂದು ದೂರುದಾರ-ಮಹಿಳೆ ಹೇಳಿದ್ದರು.
ಆತ ಹಣ ಮರಳಿಸದಿದ್ದರೂ ಇನ್ನೂ ದೊಡ್ಡ ಮೊತ್ತದ ಹಣವನ್ನು ಆಕೆ ಆತನಿಗೆ ನೀಡಿದ್ದಾಳೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿದೆ. ಪ್ರಕರಣದ ಸಂದರ್ಭ ಮತ್ತು ಸನ್ನಿವೇಶಗಳ ಒಟ್ಟಾರೆ ಪರಿಶೀಲನೆ ಆಧಾರದಲ್ಲಿ ಆರೋಪಿಗೆ ಜಾಮೀನು ನೀಡಲು ನ್ಯಾಯಾಲಯ ನಿರ್ಧರಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]