ದೇಶದ್ರೋಹ, ಯುಎಪಿಎ ಪ್ರಕರಣ: ಶಾರ್ಜೀಲ್ ಇಮಾಮ್‌ಗೆ ದೆಹಲಿ ಹೈಕೋರ್ಟ್ ಜಾಮೀನು
ದೆಹಲಿಯ ಜಾಮಿಯಾ ಪ್ರದೇಶ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಆರೋಪದ ಮೇಲೆ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (UAPA) ಅಡಿ ಹೂಡಲಾಗಿದ್ದ ಪ್ರಕರಣಗಳಲ್ಲಿ ಹೋರಾಟಗಾರ ಶಾರ್ಜೀಲ್ ಇಮಾಮ್‌ಗೆ ದೆಹಲಿ ಹೈಕೋರ್ಟ್ ಸೋಮವಾರ ಶಾಸನಬದ್ಧ ಜಾಮೀನು ನೀಡಿದೆ.
ತನಗೆ ವಿದಿಸಲಾದ ಶಿಕ್ಷೆಯ ಅರ್ಧದಷ್ಟು ಅವಧಿಯನ್ನು ಈಗಾಗಲೇ ಅನುಭವಿಸಿದ್ದೇನೆ ಎಂಬ ಶಾರ್ಜೀಲ್ ಅವರ ವಾದ ಪರಿಗಣಿಸಿದ ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.
ಆದರೂ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಆರೋಪಿಯಾಗಿರುವ ಶಾರ್ಜೀಲ್ ಸೆರೆವಾಸ ಮುಂದುವರೆಯಲಿದೆ.
ದೇಶದ್ರೋಹ ಪ್ರಕರಣದಲ್ಲಿ ತನಗೆ ಜಾಮೀನು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಪ್ರತಿಭಟನೆ ಮಾಡುವಾಗ ಎಎಂಯು ಮತ್ತು ಜಾಮಿಯಾ ಪ್ರದೇಶದಲ್ಲಿ ಇಮಾಮ್ ಮಾಡಿದ ಭಾಷಣಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಅವರನ್ನು ಜನವರಿ 28, 2020ರಂದು ಬಂಧಿಸಲಾಗಿತ್ತು.
ಗರಿಷ್ಠ ಏಳು ವರ್ಷಗಳ ಶಿಕ್ಷೆಯಲ್ಲಿ ನಾಲ್ಕು ವರ್ಷಗಳನ್ನು ಈಗಾಗಲೇ ಜೈಲಿನಲ್ಲಿ ಕಳೆದಿದ್ದರಿಂದ ತಾನು ಶಾಸನಬದ್ಧ ಜಾಮೀನು ಪಡೆಯಲು ಅರ್ಹ ಎಂದು ಶಾರ್ಜೀಲ್ ವಾದಿಸಿದ್ದರು.
ದೇಶದ್ರೋಹ ಅಪರಾಧ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ತಡೆಹಿಡಿದಿದ್ದು ತನ್ನ ವಿರುದ್ಧ ದಾಖಲಿಸಲಾಗಿರುವ ಯುಎಪಿಎ ಸೆಕ್ಷನ್‌ಗಳಡಿ ಏಳು ವರ್ಷಗಳಿಗಿಂತ ಹೆಚ್ಚಿನ ಶಿಕ್ಷೆ ವಿಧಿಸಲು ಆಗದು ಎಂದು ಅವರು ವಿವರಿಸಿದ್ದರು.