
ಭಾರತೀಯ ಕಂಪನಿ ಐಕೀ ಹೋಮ್ ಸ್ಟುಡಿಯೋ ವಿರುದ್ಧ ದಾಖಲಿಸಿದ್ದ ವಾಣಿಜ್ಯ ಚಿಹ್ನೆ ಉಲ್ಲಂಘನೆ ಮೊಕದ್ದಮೆಯಲ್ಲಿ ಸ್ವೀಡಿಷ್ ಬಹುರಾಷ್ಟ್ರೀಯ ಪೀಠೋಪಕರಣ ದೈತ್ಯ ಕಂಪೆನಿ ಐಕಿಯ ಪರವಾಗಿ ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಧ್ಯಂತರ ನಿರ್ಬಂಧಕಾಜ್ಞೆ ನೀಡಿದೆ.
ಐಕೀ, ಐಕೀ ಹೋಮ್ ಸ್ಟುಡಿಯೊ ಅಥವಾ ಐಕಿಯ ವಾಣಿಜ್ಯ ಚಿಹ್ನೆಯನ್ನು ಹೋಲುವ ಇನ್ನಾವುದೇ ಗುರುತನ್ನು ಬಳಸದಂತೆ ಮತ್ತು ತನ್ನ ಉತ್ಪನ್ನಗಳನ್ನು ಐಕಿಯ ಉತ್ಪನ್ನಗಳೆಂಬಂತೆ ಪೂರೈಸದಂತೆ ಐಕೀ ಭಾರತೀಯ ಕಂಪೆನಿಗೆ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ ಡಿಸೆಂಬರ್ 18ರಂದು ನಿರ್ಬಂಧಿಸಿದೆ.
ಅಲ್ಲದೆ ikeyllp.com ಎಂಬ ಡೊಮೇನ್ ಹೆಸರನ್ನು ಅಮಾನತುಗೊಳಿಸುವಂತೆ ಮತ್ತು ಡೊಮೇನ್ ಹೆಸರಿನ ನೋಂದಣಿ ವಿವರಗಳನ್ನು ಬಹಿರಂಗಪಡಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ನಿರ್ಬಂಧಕಾಜ್ಞೆ ಮಂಜೂರು ಮಾಡಲು ಅಗತ್ಯವಾದ ಪ್ರಾಥಮಿಕ ಅಂಶಗಳನ್ನು ಫಿರ್ಯಾದಿ (ಐಕಿಯ) ಶ್ರುತಪಡಿಸಿದ್ದಾರೆ. ಏಕಪಕ್ಷೀಯ ಆದೇಶ- ಮಧ್ಯಂತರ ತಡೆಯಾಜ್ಞೆ ನೀಡದೆ ಹೋದರೆ ಫಿರ್ಯಾದಿಗೆ ಸರಿಪಡಿಸಲಾಗದ ನಷ್ಟ ಉಂಟಾಗುತ್ತದೆ. ಅಲ್ಲದೆ ಸಮಂಜಸತೆಯ ಸಮತೋಲನ ಫಿರ್ಯಾದಿ ಪರವಾಗಿ ಮತ್ತು ಪ್ರತಿವಾದಿ (ಐಕಿ ಹೋಮ್ ಸ್ಟುಡಿಯೋ) ವಿರುದ್ಧವಾಗಿ ಇದೆ ಎಂದು ಅದು ವಿವರಿಸಿದೆ.
1943ರಲ್ಲಿ ಸ್ಥಾಪನೆಯಾದ; ಜೋಡಣೆಗೆ ಸಿದ್ಧವಾಗಿರುವ ಪೀಠೋಪಕರಣ, ಒಳಾಂಗಣ ಅಲಂಕಾರ ಮತ್ತು ಗೃಹೋಪಯೋಗಿ ಪರಿಕರಗಳನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುವ ತನಗೆ ಚೀನಾ, ಚಿಲಿ ಮತ್ತು ಇಂಡೋನೇಷ್ಯಾ, ಇಟಲಿ, ಕಝಾಕಿಸ್ತಾನ್, ಟರ್ಕಿ ಐರೋಪ್ಯ ಒಕ್ಕೂಟಗಳಲ್ಲಿ ತನ್ನದೇ ಆದ ಜಾಗತಿಕ ಮೌಲ್ಯ, ವ್ಯವಹಾರ ಹಾಗೂ ವರ್ಚಸ್ಸು ಇರುವುದಾಗಿ ಐಕಿಯ ಹೇಳಿಕೊಂಡಿತ್ತು.
ವಾಣಿಜ್ಯ ಚಿಹ್ನೆಗೆ ಸಂಬಂಧಿಸಿದ ನಿಯತಕಾಲಿಕ ಪರಿಶೀಲನೆ ವೇಳೆ ಟೈಲ್ಸ್, ಸ್ಯಾನಿಟರಿ ವೇರ್‌ಗಳು, ಕೊಳಾಯಿ ವಸ್ತುಗಳು, ಹಾರ್ಡ್‌ವೇರ್ ಮತ್ತು ಬಣ್ಣಗಳು, ಗಾಜು ಮತ್ತು ಪ್ಲೈವುಡ್ ಮಾರಾಟ ಮಾಡುವ ಐಕಿ ಕಂಪೆನಿ ತನ್ನದೇ ವಾಣಿಜ್ಯ ಚಿಹ್ನೆ ಹೋಲುವ ಹೆಸರನ್ನು ಬಳಸುತ್ತಿರುವುದು ಐಕಿಯ ಗಮನಕ್ಕೆ ಬಂದಿತ್ತು. ಈ ಕುರಿತು ನೋಟಿಸ್ ನೀಡಿದಾಗ ಐಕಿ ಹೋಲಿಕೆಯನ್ನು ನಿರಾಕರಸಿತ್ತು. ಆಗ ʼಐಕೀʼಯ ಚಟುವಟಿಕೆಗಳನ್ನು ಪರಿಶೀಲಿಸಲು ಐಕಿಯ ತನಿಖಾಧಿಕಾರಿ ನಿಯೋಜಿಸಿತು. ಅಲ್ಲದೆ ಗ್ರಾಹಕರು ಐಕಿಯವನ್ನು ಐಕೀಯೊಂದಿಗೆ ಸಮೀಕರಿಸಿಕೊಂಡು ಸುಳ್ಳೇ ನಂಬುವ ಗಂಭೀರ ಆತಂಕವನ್ನು ಐಕಿಯ ನ್ಯಾಯಾಲಯದೆದುರು ತೋಡಿಕೊಂಡಿತ್ತು. ಐಕೀ ಪರವಾಗಿ ಯಾರೂ ವಾದ ಮಂಡಿಸಲಿಲ್ಲ.
ಈ ಹಿನ್ನೆಲೆಯಲ್ಲಿ ಐಕಿಯ ಪರವಾಗಿ ಏಕಪಕ್ಷೀಯ ತಡೆಯಾಜ್ಞೆ ನೀಡಿದ ನ್ಯಾಯಾಲಯ ಪ್ರಕರಣವನ್ನು ಮೇ 9, 2025ಕ್ಕೆ ಮುಂದೂಡಿತು.
ಐಕಿಯ ಪರ ವಕೀಲರಾದ ಶ್ವೇತಾಶ್ರೀ ಮಜುಂದಾರ್, ತಾನ್ಯಾ ವರ್ಮಾ, ವರದನ್ ಆನಂದ್ ಮತ್ತು ರುಚಿಕಾ ಯಾದವ್ ವಾದ ಮಂಡಿಸಿದ್ದರು.