ಜಾರಿ ನಿರ್ದೇಶನಾಲಯದಿಂದ ತುರ್ತು ವಿಚಾರಣೆ ಕೋರಿಕೆ: ಅರವಿಂದ್‌ ಕೇಜ್ರಿವಾಲ್‌ ಬಿಡುಗಡೆ ತಡೆಹಿಡಿದ ದೆಹಲಿ ಹೈಕೋರ್ಟ್‌

ಕೇಜ್ರಿವಾಲ್‌ ಜಾಮೀನಿಗೆ ವಿರೋಧಿಸಲು ವಿಚಾರಣಾಧೀನ ನ್ಯಾಯಾಲಯವು ಸಾಕಷ್ಟು ಸಮಯ ನೀಡಲಿಲ್ಲ ಎಂದು ʼಬಾರ್‌ ಅಂಡ್‌ ಬೆಂಚ್‌ʼ ವರದಿ ಉಲ್ಲೇಖಿಸಿದ ಎಎಸ್‌ಜಿ.
Arvind Kejriwal, ED and Delhi High Court
Arvind Kejriwal, ED and Delhi High Court
Published on

ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿ ಬಿಡುಗಡೆಗೆ ಆದೇಶಿಸಿದ್ದ ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಗುರುವಾರ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಹೈಕೋರ್ಟ್‌ ಶುಕ್ರವಾರ ಕೇಜ್ರಿವಾಲ್‌ ಬಿಡುಗಡೆ ತಡೆ ಹಿಡಿದಿದೆ.

ನ್ಯಾಯಮೂರ್ತಿಗಳಾದ ಸುಧೀರ್‌ ಕುಮಾರ್‌ ಜೈನ್‌ ಮತ್ತು ರವೀಂದ್ರ ದುಡೇಜಾ ಅವರ ರಜಾಕಾಲೀನ ವಿಭಾಗೀಯ ಪೀಠದ ಮುಂದೆ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಉಲ್ಲೇಖಿಸಿದರು.

“ವಿಚಾರಣಾಧೀನ ನ್ಯಾಯಾಲಯದ ಜಾಮೀನು ಆದೇಶಕ್ಕೆ ತುರ್ತು ತಡೆ ನೀಡಬೇಕು ಎಂದು ಕೋರುತ್ತಿದ್ದೇನೆ. ರಾತ್ರಿ 8 ಗಂಟೆಗೆ ಆದೇಶ ಮಾಡಲಾಗಿದೆ. ಇನ್ನೂ ಆದೇಶವನ್ನು ಅಪ್‌ಲೋಡ್‌ ಮಾಡಲಾಗಿಲ್ಲ. ಜಾಮೀನಿಗೆ ವಿರೋಧಿಸಲು ನಮಗೆ ಸೂಕ್ತ ಅವಕಾಶ ನೀಡಿಲ್ಲ” ಎಂದು ಎಎಸ್‌ಜಿ ಹೇಳಿದರು.

“ನನ್ನ ವಾದವನ್ನು ತುಂಡರಿಸಿದರು ಎಂಬ ಅಂಶ ʼಬಾರ್‌ ಅಂಡ್‌ ಬೆಂಚ್‌ʼ ವರದಿಯಲ್ಲಿದೆ. ಜಾಮೀನು ಆದೇಶಕ್ಕೆ ತಡೆ ನೀಡಬೇಕು ಎಂಬ ತನ್ನ ಕೋರಿಕೆಯನ್ನೂ ಪರಿಗಣಿಸಲಾಗಿಲ್ಲ. ಹೀಗಾಗಿ, ವಿಚಾರಣಾಧೀನ ಆದೇಶಕ್ಕೆ ತಡೆ ವಿಧಿಸಬೇಕು ಹಾಗೂ ಸಾಧ್ಯವಾದಷ್ಟು ಬೇಗ ವಾದ ಆಲಿಸಬೇಕು. ಪ್ರಕರಣದಲ್ಲಿ ವಾದಿಸಲು ಪೂರ್ಣ ಅವಕಾಶವನ್ನು ನಮಗೆ ನಿರಾಕರಿಸಲಾಗಿದೆ. ಅತ್ಯಂತ ಗಂಭೀರವಾಗಿ ಈ ಆರೋಪ ಮಾಡುತ್ತಿದ್ದೇನೆ” ಎಂದರು.

Also Read
ಅಬಕಾರಿ ನೀತಿ ಪ್ರಕರಣ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿದ ದೆಹಲಿ ನ್ಯಾಯಾಲಯ

ಕೇಜ್ರಿವಾಲ್‌ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಜಾರಿ ನಿರ್ದೇಶನಾಲಯದ ಜಾಮೀನು ಆದೇಶಕ್ಕೆ ತಡೆ ಕೋರಿಕೆಗೆ ವಿರೋಧಿಸಿದರು. “ಜಾಮೀನು ರದ್ದತಿಯು ಜಾಮೀನು ನೀಡುವುದಕ್ಕಿಂತ ವಿಭಿನ್ನ ಎನ್ನುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹತ್ತು ತೀರ್ಪುಗಳಿವೆ” ಎಂದರು.

ಪಕ್ಷಕಾರರನ್ನು ಆಲಿಸಿದ ಪೀಠವು “ಪ್ರಕರಣದಲ್ಲಿ ವಾದ ಆಲಿಸುವವರೆಗೆ ಜಾಮೀನು ಆದೇಶ ಜಾರಿಗೊಳಿಸಬಾರದು. ನಾವು ಅಂತಿಮ ಆದೇಶ ಮಾಡಿಲ್ಲ” ಎಂದ ಪೀಠವು ಇಂದೇ ವಿಚಾರಣೆ ನಡೆಸುವುದಾಗಿ ಹೇಳಿದೆ. 

Kannada Bar & Bench
kannada.barandbench.com